×
Ad

ಬೆಂಗಳೂರು: ಪೊಲೀಸರ ವರ್ಗಾವಣೆಗೆ ಏಳು ವರ್ಷ ಸೇವೆ ಪೂರೈಕೆ ಕಡ್ಡಾಯ

Update: 2020-10-05 22:23 IST
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು, ಅ.5: ಬೆಂಗಳೂರು ಕಮಿಷನರೇಟ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸರ ಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದಂತೆ ನೆನಪೋಲೆ ಪ್ರಕಟಿಸಿದ್ದು, ಕಡ್ಡಾಯವಾಗಿ 7 ವರ್ಷ ಸೇವೆ ಪೂರೈಸಿರುವವರಿಗಷ್ಟೆ ಕೋರಿಕೆ ಮೇರೆಗೆ ಅಂತರ್ ಜಿಲ್ಲಾ ವರ್ಗಾವಣೆಗೆ ಪರಿಗಣಿಸಬೇಕು ಎಂದು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

ಬೆಂಗಳೂರು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಕೋರಿಕೆ ಮೇರೆಗೆ ಸೇವಾ ಜ್ಯೇಷ್ಠತೆ ಬಿಟ್ಟುಕೊಡುವ ಶರತ್ತಿಗೊಳಪಟ್ಟು ಇತರೆ ಜಿಲ್ಲೆ ಹಾಗೂ ನಗರಗಳಿಗೆ ವರ್ಗಾವಣೆಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಯಮಾವಳಿ ಅನುಸರಿಸದೆ ವರ್ಗಾವಣೆ ಕೋರಿ ಪ್ರಧಾನ ಪೊಲೀಸ್ ಕಚೇರಿಗೆ ಅರ್ಜಿಗಳನ್ನು ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಮರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ವರ್ಗಾವಣೆಗೆ ಕೋರುವ ಸಿಬ್ಬಂದಿ ಬೆಂ. ನಗರ ಘಟಕದ ಕಾನ್‍ಸ್ಟೇಬಲ್ ಹುದ್ದೆಗೆ ನೇಮಕಾತಿ ಹೊಂದಿ 7 ವರ್ಷ ಮತ್ತು ಮೇಲ್ಪಟ್ಟು ಸೇವೆ ಸಲ್ಲಿಸಿರಬೇಕು. ಜತೆಗೆ ಸಶಸ್ತ್ರ ಮೀಸಲು ಪಡೆಯ ಎಪಿಸಿ ಹುದ್ದೆಯಿಂದ ಅಥವಾ ಕೆಎಸ್‍ಐಎಸ್‍ಎಫ್ ಘಟಕದಿಂದ ಕಾನೂನು ಸುವ್ಯವಸ್ಥೆ ವಿಭಾಗದ ಸಿಪಿಸಿ ಹುದ್ದೆಗೆ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಜಿಲ್ಲಾ ವರ್ಗಾವಣೆಗೆ ಅರ್ಜಿ ಸಲ್ಲಿಸಿದರೆ ಹಿಂದಿನ ಹುದ್ದೆಯ ಸೇವಾವಧಿಯನ್ನು ಪರಿಗಣಿಸದಂತೆ ಸೂಚಿಸಲಾಗಿದೆ.

ಸಿಪಿಸಿ ಹುದ್ದೆಗೆ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ವರ್ಗಾವಣೆಗೆ ಎನ್‍ಒಸಿ ಕೋರಿ ಘಟಕದ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಿದರೆ ಸೇವಾ ಪುಸ್ತಕ ಪರಿಶೀಲಿಸಿ ಎನ್‍ಒಸಿ ವಿತರಿಸಬೇಕು. ಅರ್ಹರಾಗಿರದಿದ್ದಲ್ಲಿ ಪ್ರಧಾನ ಕಚೇರಿಗೆ ಅರ್ಜಿ ಕಳುಹಿಸದೆ ತಮ್ಮ ಹಂತದಲ್ಲೇ ತಿರಸ್ಕೃತಗೊಳಿಸಲು ಆದೇಶಿಸಲಾಗಿದೆ.

ಯಾರಿಗೆಲ್ಲ ಸಿಗಲಿದೆ ವಿನಾಯ್ತಿ?: ಪತಿ-ಪತ್ನಿ ಇಬ್ಬರೂ ಸರಕಾರಿ ನೌಕರರಾಗಿರುವ ಪ್ರಕರಣ, ವಿಧವಾ ಪ್ರಕರಣ, 2 ವರ್ಷಗಳಲ್ಲಿ ನಿವೃತ್ತಿ ಹೊಂದಲಿರುವ ಸಿಬ್ಬಂದಿಗೆ ಪತ್ನಿ, ಮಕ್ಕಳು ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಉಪಚಾರಕ್ಕಾಗಿ ವರ್ಗಾವಣೆ ಅತಿ ಅವಶ್ಯಕತೆ ಎಂದು ವೈದ್ಯಕೀಯ ಮಂಡಳಿ ಶಿಫಾರಸ್ಸು ಮಾಡಿರುವ ಪ್ರಕರಣ.

2019ರಲ್ಲಿ ಸೇವಾಮಿತಿ ಏರಿಕೆ ವರ್ಗಾವಣೆಗೆ ಕನಿಷ್ಠ 3 ವರ್ಷಗಳ ಸೇವಾವಧಿ ಮಿತಿ ನಿಗದಿಗೊಳಿಸಲಾಗಿತ್ತು. ನಂತರ 5 ವರ್ಷಗಳ ಅವಧಿಗೆ ಏರಿಸಲಾಗಿತ್ತು. 2019ರಲ್ಲಿ ನಿಯಮವನ್ನು ಭಾಗಶಃ ಮಾರ್ಪಾಡುಗೊಳಿಸಿ ತರಬೇತಿ ಅವಧಿ (1 ವರ್ಷ ಮೂಲಬುನಾದಿ ತರಬೇತಿ ಮತ್ತು 1 ವರ್ಷ ಪ್ರಾಯೋಗಿಕ ತರಬೇತಿ) ಪೂರೈಸಿದ ನಂತರ 5 ವರ್ಷ ಪೂರೈಸಿದ ಅಂದರೆ ಒಟ್ಟು 7 ವರ್ಷ ಸೇವೆ ಪೂರೈಸಿದ ಅಧಿಕಾರಿ/ ಸಿಬ್ಬಂದಿಯನ್ನು ಮಾತ್ರ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸುವಂತೆ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News