'ಕಾಡುಗೊಲ್ಲ ಅಭಿವೃದ್ಧಿ ನಿಗಮ' ಸ್ಥಾಪಿಸಿದ ಸಿಎಂಗೆ ಕರಿಕಂಬಳಿ, ಕುರಿ ಮರಿಗಳ ಉಡುಗೊರೆ

Update: 2020-10-05 17:11 GMT

ಬೆಂಗಳೂರು, ಅ. 5: ರಾಜ್ಯದಲ್ಲಿ `ಕಾಡುಗೊಲ್ಲ ಅಭಿವೃದ್ಧಿ ನಿಗಮ' ಸ್ಥಾಪಿಸಿದ್ದಕ್ಕಾಗಿ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಅಭಿನಂದಿಸಿದರು.

ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ತೆರಳಿದ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದ ಮುಖಂಡರು, ಸಿಎಂ ಬಿಎಸ್‍ವೈ ಅವರಿಗೆ ಸಮುದಾಯದ ಸಂಕೇತವಾಗಿರುವ ಕರಿಕಂಬಳಿ, ಎರಡು ಕುರಿ ಮರಿಗಳನ್ನು ಉಡುಗೊರೆ ನೀಡಿ ಗೌರವಿಸಿದರು.

ಎಸ್ಟಿಗೆ ಸೇರ್ಪಡೆಗೆ ಒತ್ತಡ ಹೇರಲು ಮನವಿ: ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಕಾಡುಗೊಲ್ಲ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್ಟಿ)ದಡಿಯಲ್ಲಿ ಮೀಸಲಾತಿ ಕಲ್ಪಿಸಲು ಈಗಾಗಲೇ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಹೀಗಾಗಿ ಕೇಂದ್ರದ ಮೇಲೆ ಒತ್ತಡ ಹೇರಿ ಈ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಮುಖಂಡರು ಸಿಎಂಗೆ ಇದೇ ವೇಳೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಈ ವೇಳೆ ಸಂಸದ ಎ.ನಾರಾಯಣಸ್ವಾಮಿ, ಕಾಡುಗೊಲ್ಲ ಸಮುದಾಯದ ಮುಖಂಡರಾದ ಮೀಸೆ ಮಹಾಲಿಂಗಪ್ಪ, ಸಿದ್ದೇಶ್ ಯಾದವ್, ಆನಂದ್, ರಂಗಸ್ವಾಮಿ, ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News