ಸಾಮಾಜಿಕ ಜಾಲತಾಣಗಳು ತರುವ ಈ ಆಧುನಿಕ ರೋಗಗಳು ನಿಮಗೆ ಗೊತ್ತಿರಲಿ

Update: 2023-06-30 05:07 GMT

ನೆಟ್‌ಫ್ಲಿಕ್ಸ್‌ನ ಸಾಕ್ಷಚಿತ್ರ ‘ದಿ ಸೋಶಿಯಲ್ ಡೈಲೆಮಾ ’ ಸಾಮಾಜಿಕ ಜಾಲತಾಣಗಳುಂಟು ಮಾಡುವ ಹಲವಾರು ಕೆಡುಕುಗಳ ಬಗ್ಗೆ ಚರ್ಚಿಸಿದೆ. ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಮತ್ತು ಸ್ವೀಕೃತಿಯ ಅಗತ್ಯದಿಂದ ಹುಟ್ಟಿಕೊಳ್ಳುವ ಸ್ನಾಪ್‌ಚಾಟ್ ಡಿಸ್‌ಮಾರ್ಫಿಯಾ ಇಂತಹ ಕೆಡುಕುಗಳಲ್ಲೊಂದಾಗಿದೆ. ಇಂದಿನ ತಲೆಮಾರನ್ನು ಆವರಿಸಿಕೊಳ್ಳುತ್ತಿರುವ,ಸಾಮಾಜಿಕ ಜಾಲತಾಣಗಳಿಂದ ಹುಟ್ಟಿಕೊಂಡಿರುವ ಕೆಲವು ಆಧುನಿಕ ರೋಗಗಳ ಕುರಿತು ವಿವರಗಳಿಲ್ಲಿವೆ........

 * ಫಬಿಂಗ್: ವ್ಯಕ್ತಿ ಸದಾ ಕಾಲ ತನ್ನ ಮೊಬೈಲ್ ಫೋನ್‌ಗೆ ಅಂಟಿಕೊಂಡು ತನ್ನ ಕುಟುಂಬ ಸದಸ್ಯರು ಅಥವಾ ಸ್ನೇಹಿತರನ್ನು ಕಡೆಗಣಿಸುವುದು ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯೊಂದಿಗೆ ಗುರುತಿಸಿಕೊಂಡಿರುವ ಸಾಮಾನ್ಯ ಪರಿಪಾಠವಾಗಿದೆ. ಈ ಪ್ರವೃತ್ತಿಯನ್ನು ಫಬಿಂಗ್ ಎಂದು ಕರೆಯಲಾಗುತ್ತದೆ. ಇದು ಸಂಬಂಧಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಮುಖಾಮುಖಿ ಸಂವಾದಗಳನ್ನು ತಗ್ಗಿಸುತ್ತದೆ,ಇಂತಹ ಸಂವಾದಗಳನ್ನು ನಡೆಸುವುದನ್ನೂ ಕಠಿಣವಾಗುತ್ತದೆ. ಈ ಅಭ್ಯಾಸದಿಂದಾಗಿ ಅಂತಹವರು ಒರಟು ಮತ್ತು ಧಿಮಾಕಿನ ವ್ಯಕ್ತಿಗಳೆಂಬ ಹಣೆಪಟ್ಟಿಗೆ ಗುರಿಯಾಗುತ್ತಾರೆ ಮತ್ತು ಇದು ಅವರ ಆತ್ಮಗೌರವ ಮತ್ತು ಅರ್ಥಪೂರ್ಣ ಅಸ್ತಿತ್ವಕ್ಕೆ ಬೆದರಿಕೆಯಾಗುತ್ತದೆ.

 * ಫೇಸ್‌ಬುಕ್ ಖಿನ್ನತೆ: ಫೇಸ್‌ಬುಕ್ ಖಿನ್ನತೆಯು ಇಂದು ಮಕ್ಕಳು ಮತ್ತು ಹದಿಹರೆಯದವರಲ್ಲಿ ಸಾಮಾನ್ಯವಾಗಿದೆ. ಇದು ನ್ಯೂಸ್ ಫೀಡ್‌ಗಳು, ಫೋಟೊಗಳು,ವಾಲ್ ಪೋಸ್ಟ್‌ಗಳು ಇತ್ಯಾದಿಗಳನ್ನು ಪರಿಶೀಲಿಸುತ್ತಿರುವಾಗ ತನ್ನನ್ನು ಯಾರೂ ಗುರುತಿಸುತ್ತಿಲ್ಲ ಎಂಬ ಭಾವನೆಗೆ ಸಂಬಂಧಿಸಿದೆ ಮತ್ತು ವಿಶೇಷವಾಗಿ ಮಕ್ಕಳಲ್ಲಿ ಕೀಳರಿಮೆಯನ್ನು ಉಂಟು ಮಾಡಬಹುದು. ಸಾಮಾಜಿಕ ಮಾಧ್ಯಮಗಳ ಬಳಕೆಯು ನೇರವಾಗಿ ಖಿನ್ನತೆಯನ್ನುಂಟು ಮಾಡದಿರಬಹುದು,ಆದರೆ ಈಗಾಗಲೇ ಖಿನ್ನತೆಗೆ ಗುರಿಯಾಗಿರುವ ಯುವಜನರು ಸಾಮಾಜಿಕ ಮಾಧ್ಯಮಗಳಿಂದ ಋಣಾತ್ಮಕ ಪ್ರಭಾವಕ್ಕೊಳಗಾದಾಗ ಅವರ ಖಿನ್ನತೆ ಇನ್ನಷ್ಟು ತೀವ್ರಗೊಳ್ಳುತ್ತದೆ. ತಾವು ಏನಾದರನ್ನು ಪೋಸ್ಟ್ ಮಾಡಿದಾಗ ಅಥವಾ ಬರೆದಾಗ ಅದನ್ನು ಯಾರೂ ಇಷ್ಟ ಪಡದಿದ್ದರೆ ಎಂಬ ಚಿಂತೆಯು ಫೇಸ್‌ಬುಕ್ ಖಿನ್ನತೆಯಿಂದ ಬಳಲುತ್ತಿರುವವರನ್ನು ಕಾಡುತ್ತಿರುತ್ತದೆ.

* ಸ್ನಾಪ್‌ಚಾಟ್ ಡಿಸ್‌ಮಾರ್ಫಿಯಾ ಸಿಂಡ್ರೋಮ್: ಇದು ಬಾಡಿ ಡಿಸ್‌ಮಾರ್ಫಿಯಾ ಸಿಂಡ್ರೋಮ್(ಬಿಡಿಎಸ್)ನ ಒಂದು ರೂಪವಾಗಿದೆ. ವ್ಯಕ್ತಿ ತಾನು ಹೇಗೆ ಕಾಣಿಸುತ್ತೇನೆ ಎಂದು ತುಂಬಾ ಚಿಂತಿಸುತ್ತಿದ್ದರೆ ಮತ್ತು ತಮ್ಮ ರೂಪದಲ್ಲಿಯೇ ಏನೋ ಸಮಸ್ಯೆಯಿದೆ ಎಂದು ತಪ್ಪು ಗ್ರಹಿಕೆಗೊಳಗಾದಾಗ ಅಂತಹ ಮಾನಸಿಕ ಅಸ್ವಸ್ಥ ಸ್ಥಿತಿಯನ್ನು ಬಿಡಿಎಸ್ ಎಂದು ಕರೆಯಲಾಗುತ್ತದೆ. ಇಂತಹ ವ್ಯಕ್ತಿಗಳು ತಮ್ಮ ಶರೀರದ ಬಗ್ಗೆ ಅತಿಯಾದ ಗೀಳು ಹೊಂದಿರುತ್ತಾರೆ ಮತ್ತು ಪಿಕ್ಚರ್ ಫರ್ಫೆಕ್ಟ್ ಆಗಲು ಅಥವಾ ಸ್ನಾಪ್‌ಚಾಟ್ ಫಿಲ್ಟರ್‌ಗಳ ನಿಕಟ ಸಾಮ್ಯವನ್ನು ಹೊಂದಲು ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಲೋಪವಿಲ್ಲದೆ ಕಾಣಿಸಿಕೊಳ್ಳಲು ವಿಫುಲ ಎಡಿಟಿಂಗ್ ಆಯ್ಕೆಗಳ ಲಭ್ಯತೆಯು ಇದರ ಹಿಂದಿನ ಕಾರಣವಾಗಿದೆ.

* ಸೋಷಿಯಲ್ ಮೀಡಿಯಾ ಆ್ಯಂಕ್ಸೈಟಿ ಡಿಸಾರ್ಡರ್ (ಎಸ್‌ಎಂಎಡಿ): ಸಾಮಾಜಿಕ ಮಾಧ್ಯಮಗಳು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಲು ಆರಂಭಿಸಿದಾಗ ಅಂತಹ ಸ್ಥಿತಿಯನ್ನು ಎಸ್‌ಎಂಎಡಿ ಎಂದು ಕರೆಯಲಾಗುತ್ತದೆ. ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಅಪರಿಚಿತರನ್ನು ಸೇರಿಸಿಕೊಳ್ಳುವುದು,8-9 ಗಂಟೆ ಸಮಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುವುದು,ಕಮೆಂಟ್‌ಗಳು ಅಥವಾ ಚಿತ್ರಗಳು ಸರಿಯಾಗಿ ಪೋಸ್ಟ್ ಆಗಿಲ್ಲದಿದ್ದರೆ ಒಂದು ರೀತಿಯ ಆತಂಕದ ಭಾವನೆ,ಫಾಲೋವರ್‌ಗಳ ಸಂಖ್ಯೆಯನ್ನು ನಿರಂತರವಾಗಿ ಪರಿಶೀಲಿಸುತ್ತಿರುವುದು,ಡಿವೈಸ್‌ಗಳ ಜೊತೆ ಅನುಬಂಧದ ಭಾವನೆ,ಸುತ್ತಲೂ ಕುಟುಂಬ ಸದಸ್ಯರು ಅಥವಾ ಸ್ನೇಹಿತರಿದ್ದಾಗಲೂ ಸಾಮಾಜಿಕ ಜಾಲತಾಣ ಖಾತೆಗಳನ್ನು ತಡಕಾಡುತ್ತಿರುವುದು ಇತ್ಯಾದಿಗಳು ಈ ರೋಗದ ಹೆಚ್ಚು ಸಾಮಾನ್ಯವಾಗಿರುವ ಲಕ್ಷಣಗಳಾಗಿವೆ. ಇಂತಹ ವ್ಯಕ್ತಿಗಳು ಕೀಳರಿಮೆಯನ್ನು ಬೆಳೆಸಿಕೊಳ್ಳುವ ಜೊತೆಗೆ ಕುಟುಂಬದೆಡೆಗೆ ನಿರ್ಲಕ್ಷ್ಯ, ವ್ಯಕ್ತಿತ್ವದ ಸಮಸ್ಯೆಗಳು,ಅತೀವ ಒಂಟಿತನ ಇತ್ಯಾದಿಗಳಿಂದ ನರಳುತ್ತಿರುತ್ತಾರೆ.

* ಫ್ಯಾಂಟಮ್ ರಿಂಗಿಂಗ್ ಸಿಂಡ್ರೋಮ್: ತನ್ನ ಮೊಬೈಲ್ ಫೋನ್ ರಿಂಗ್ ಅಥವಾ ವೈಬ್ರೇಟ್ ಆಗುತ್ತಿಲ್ಲವಾದರೂ ಹಾಗೆ ಆಗುತ್ತಿದೆ ಎಂದು ಅನಿಸುತ್ತಿರುತ್ತದೆ,ಇದನ್ನು ಫ್ಯಾಂಟಮ್ ವೈಬ್ರೇಷನ್ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಇದು ಸ್ಪರ್ಶಸಂಬಂಧಿ ಭ್ರಾಂತಿಯ ಒಂದು ರೂಪವಾಗಿದ್ದು,ಮಿದುಳು ಅಸ್ತಿತ್ವದಲ್ಲಿಯೇ ಇರದ ಸಂಕೇತಗಳನ್ನು ಸ್ವೀಕರಿಸುತ್ತದೆ. ಯಾವುದೇ ಸಮಯದಲ್ಲಿ ಫೋನ್ ರಿಂಗ್ ಆಗುತ್ತಿದೆ ಎಂದು ಅನ್ನಿಸಬಹುದು. ಸಾಮಾನ್ಯವಾಗಿ ಫೋನ್‌ಗಳೊಂದಿಗೆ ಅತಿಯಾದ ಸಮಯವನ್ನು ಕಳೆಯುವುದು ಈ ಕಾಯಿಲೆಯನ್ನುಂಟು ಮಾಡುತ್ತದೆ ಮತ್ತು ಇದು ಫೋನ್‌ನ ಅತಿಯಾದ ಬಳಕೆಯ ಒಂದು ತಿಂಗಳಿನಿಂದ ಒಂದು ವರ್ಷದವರೆಗಿನ ಅವಧಿಯಲ್ಲಿ ಸಂಭವಿಸಬಹುದು. ಕೆಲವರಿಗೆ ದಿನವೂ ವೈಬ್ರೇಷನ್ ಶಬ್ದ ಕೇಳಬಹುದು,ಇನ್ನು ಕೆಲವರಿಗೆ ಅದು ಕೆಲವೊಮ್ಮೆ ಅಥವಾ ಎರಡು ವಾರಗಳಿಗೊಮ್ಮೆ ಕೇಳಬಹುದು. ಈ ಸಮಸ್ಯೆಯಿಂದ ಪಾರಾಗಲು ಫೋನ್‌ನ ವೈಬ್ರೇಷನ್ ಅನ್ನು ಬಂದ್ ಮಾಡಬಹುದು ಅಥವಾ ರಿಂಗ್‌ಟೋನ್ ಅನ್ನು ಬದಲಿಸಿ ನೋಡಬಹುದು.

* ನೊಮೊಫೋಬಿಯಾ

ನಿಮ್ಮ ಹತ್ತಿರದಲ್ಲಿ ನಿಮ್ಮ ಮೊಬೈಲ್ ಫೋನ್ ಇಲ್ಲದಿರುವ ಅಥವಾ ಅದನ್ನು ಬಳಸಲು ಸಾಧ್ಯವಾಗದಿರುವ ಭೀತಿಯನ್ನು ‘ನೋ ಮೊಬೈಲ್ ಫೋನ್ ಫೋಬಿಯಾ(ನೊಮೊಫೋಬಿಯಾ)’ ಎಂದು ಕರೆಯಲಾಗುತ್ತದೆ. ಈ ರೋಗವು ಎಷ್ಟೊಂದು ತೀವ್ರವಾಗುತ್ತದೆ ಎಂದರೆ ವ್ಯಕ್ತಿಯ ದೈನಂದಿನ ಬದುಕಿನ ಮೇಲೆ ಪರಿಣಾಮವನ್ನುಂಟು ಮಾಡತೊಡಗುತ್ತದೆ. ಫೋನ್ ಸಿಗದಿದ್ದಾಗ ಕೆರಳುವಿಕೆ,ಒತ್ತಡ,ಆತಂಕ ಅಥವಾ ಭೀತಿ ಇವೆಲ್ಲ ಇದರ ಲಕ್ಷಣಗಳಲ್ಲಿ ಸೇರಿವೆ. ಮೈನಡುಗುವಿಕೆ,ಎದೆ ಬಿಗಿದಂತಾಗುವುದು,ಹೆಚ್ಚಿನ ಬೆವರುವಿಕೆ ಮತ್ತು ತೀವ್ರ ಉಸಿರಾಟ ಇವೂ ಅನುಭವವಾಗುತ್ತವೆ. ಈ ರೋಗಕ್ಕೆ ಗುರಿಯಾಗಿರುವವರು ಅದನ್ನು ನಿರಂತರವಾಗಿ ನೋಡುತ್ತಿರಲು ಟಾಯ್ಲೆಟ್,ಬಾತ್‌ರೂಮ್ ಸೇರಿದಂತೆ ತಾವು ಹೋಗುವಲ್ಲೆಲ್ಲ ಜೊತೆಯಲ್ಲಿಯೇ ಒಯ್ಯುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಫೋನ್ ಬಳಿಯಲ್ಲಿಲ್ಲದಿದ್ದರೆ ಅಸಹಾಯಕತೆಯನ್ನು ಅನುಭವಿಸುತ್ತಿರುತ್ತಾರೆ.

                                                  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News