ಹೆರಿಗೆ ನಂತರ ಮಗುವನ್ನು ತೋರಿಸಲು ಲಂಚಕ್ಕೆ ಬೇಡಿಕೆ ಆರೋಪ: ಎಸಿಬಿ ಬಲೆಗೆ ಬಿದ್ದ ನರ್ಸ್

Update: 2020-10-06 17:14 GMT

ಬೆಂಗಳೂರು, ಅ.6: ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹೆರಿಗೆ ನಂತರ ಮಗುವನ್ನು ಪೋಷಕರಿಗೆ ತೋರಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವೊಂದನ್ನು ಎಸಿಬಿ ಅಧಿಕಾರಿಗಳು ಭೇದಿಸಿದ್ದಾರೆ.

ಬೆಂಗಳೂರಿನ ಉತ್ತರ ತಾಲೂಕಿನ ಗೋಪಾಲಪುರ ಗ್ರಾಮದ ನಿವಾಸಿಯೊಬ್ಬರ ಪತ್ನಿ ಹೆರಿಗೆಗಾಗಿ ಅ.3ರಂದು ನಗರದ ಕೆಜಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಮಹಿಳೆಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಿದ್ದು, ಆದರೆ ಮಗವನ್ನು ತೋರಿಸುವ ಸಲುವಾಗಿ ಅಲ್ಲಿನ ಸಿಬ್ಬಂದಿ 700 ರೂ. ಲಂಚದ ಹಣ ಪಡೆದಿದ್ದಾರೆ. ಬಳಿಕ ಅ.5ರಂದು ಕೂಡಾ ಆಸ್ಪತ್ರೆಯ ನರ್ಸ್ ಗಳಾದ ಲಲಿತಾ ಮತ್ತು ಆಶಾ ಎಂಬವರು 500 ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ ಎಸಿಬಿ ತಿಳಿಸಿದೆ.

ಅಲ್ಲದೇ, ನರ್ಸ್‍ಗಳು ಹಾಗೂ ಇನ್ನಿತೆರೆ ಸಿಬ್ಬಂದಿ ಪ್ರತಿ ದಿನ ತಲಾ ರೂ. 500ರಂತೆ ರೋಗಿಗಳಿಂದ ಒತ್ತಾಯ ಪೂರ್ವಕವಾಗಿ ಲಂಚದ ಹಣ ಪಡೆದುಕೊಳ್ಳುತ್ತಿದ್ದು, ಹಣ ನೀಡದಿದ್ದರೆ ಚಿಕಿತ್ಸೆ ನೀಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಎಸಿಬಿ ತಿಳಿಸಿದೆ.

ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ಬೇಸರಗೊಂಡ ಗೋಪಾಲಪುರದ ನಿವಾಸಿ, ಎಸಿಬಿಗೆ ದೂರು ಸಲ್ಲಿಸಿದ್ದು, ಇದರನ್ವಯ ಮಂಗಳವಾರ ಕಾರ್ಯಾಚರಣೆ ನಡೆಸಿದ ಎಸಿಬಿ ತನಿಖಾಧಿಕಾರಿಗಳು, ನರ್ಸ್ ಕೋಕಿಲಾ ಎಂಬಾಕೆ 500 ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಪ್ರಕರಣ ಬೇಧಿಸಿದ್ದಾರೆ.

ಕೋವಿಡ್-19 ಸೇರಿದಂತೆ ಇನ್ನಿತರೆ ರೋಗಿಗಳ ಬಳಿಯೂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿದ್ದವು. ಇದರ ನಡುವೆ ಅಲ್ಲಿನ ಸಿಬ್ಬಂದಿಯ ಭ್ರಷ್ಟಾಚಾರವನ್ನು ಬೇಧಿಸಿರುವ ಎಸಿಬಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News