ಕೋರ್ಟ್ ಕಲಾಪ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ಒತ್ತಾಯ: ಪಕೋಡ, ತರಕಾರಿ ಮಾರಿ ವಕೀಲರಿಂದ ಧರಣಿ

Update: 2020-10-06 17:00 GMT

ಬೆಂಗಳೂರು, ಅ.6: ಕೋರ್ಟ್ ಕಲಾಪಗಳನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸದಿರುವುದಕ್ಕೆ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದನ್ನು ಕಂಡೂ ವಕೀಲರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂದಾಗಿಲ್ಲ ಎಂದು ಆರೋಪಿಸಿ ಮಂಗಳವಾರ ವಕೀಲರು ಪಕೋಡ-ತರಕಾರಿ ಮಾರಿ ಪ್ರತಿಭಟನೆ ನಡೆಸಿದರು.

ನಗರದ ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ 5 ವರ್ಷಗಳ ಕಾನೂನು ಪದವಿ ವಕೀಲರ ಸಂಘದ ಪದಾಧಿಕಾರಿಗಳು ಪಕೋಡ, ತರಕಾರಿ ಮಾರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಾ. ಎಸ್. ಉಮೇಶ್ ಕುಮಾರ್ ಮಾತನಾಡಿ, ಕೊರೋನ ಬಂದಾಗಿನಿಂದ ಕೋರ್ಟ್‍ಗಳು ಮುಚ್ಚಿವೆ. ಇದೀಗ ಸೀಮಿತವಾಗಿ ಆನ್‍ಲೈನ್ ಕೋರ್ಟ್‍ಗಳು ನಡೆಯುತ್ತಿವೆ. ಆದರೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ವರ್ಚುಯಲ್ ಕೋರ್ಟ್‍ಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಲ್ಯಾಪ್‍ಟಾಪ್, ಇಂಟರ್ ನೆಟ್ ಸೌಲಭ್ಯ ಹೊಂದಿಸಿಕೊಳ್ಳುವುದು ಸಾಧ್ಯವಿಲ್ಲ. ಗ್ರಾಮೀಣ ಭಾಗದಿಂದ ಬಂದಿರುವ ಶೇ.60 ರಷ್ಟು ವಕೀಲರು ಇಂದಿಗೂ ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂದು ವಕೀಲರ ಸಂಕಷ್ಟ ವಿವರಿಸಿದರು.

ಚಿತ್ರಮಂದಿರ ಸೇರಿ ಎಲ್ಲ ರೀತಿಯ ಉದ್ಯಮಗಳನ್ನು ತೆರೆಯಲು ಅನುಮತಿ ನೀಡಿದ್ದಾರೆ. ಆದರೆ, ಕೋರ್ಟ್‍ಗಳನ್ನು ಮಾತ್ರ ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಇದರಿಂದಾಗಿ ವಕೀಲರು ತಮ್ಮ ಮನೆ ನಿರ್ವಹಣೆ, ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ದೈನಂದಿನ ಖರ್ಚುಗಳನ್ನು ನಿಭಾಯಿಸಲಾಗದೆ ಪರಿತಪಿಸುತ್ತಿದ್ದಾರೆ. ಎಂದಿನಂತೆ ಕೋರ್ಟ್‍ಗಳ ಭೌತಿಕ ಕಲಾಪಗಳನ್ನು ಶೀಘ್ರದಲ್ಲಿಯೇ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ವಕೀಲರ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಫಿಸಿಕಲ್ ಕೋರ್ಟ್ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಡಾ. ಎಸ್ ಉಮೇಶ್ ಕುಮಾರ್, ವಕೀಲರಾದ ಭಕ್ತವತ್ಸಲ, ಅಯಾಜ್ ಅಹ್ಮದ್, ಕೆ.ಎಸ್. ರಮೇಶ್ ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News