ಬೆಂಗಳೂರಿನಲ್ಲಿ 5 ಸಾವಿರ ಮಂದಿಗೆ ಕೊರೋನ ಸೋಂಕು ದೃಢ: 55 ಜನರು ಮೃತ್ಯು
ಬೆಂಗಳೂರು, ಅ.7: ನಗರದಲ್ಲಿ ಬುಧವಾರ ಒಂದೆ ದಿನ 5 ಸಾವಿರ ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. 2,057 ಸೋಂಕಿತರು ಬಿಡುಗಡೆಯಾಗಿದ್ದು, 55 ಜನರು ಮೃತರಾಗಿದ್ದಾರೆ.
ನಗರದಲ್ಲಿ ಒಟ್ಟು 2,62,241 ಸೋಂಕಿತರು ದೃಢಪಟ್ಟಿದ್ದು, ಇಲ್ಲಿಯವರೆಗೆ ನಗರದಲ್ಲಿ 3,190 ಜನರು ಸೋಂಕಿಗೆ ಬಲಿಯಾಗಿದ್ದಾರೆ. 2,00,426 ಜನರು ಇಲ್ಲಿಯವರೆಗೆ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 58,624 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 3,13,390 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಮಂಗಳವಾರದ ಬಿಬಿಎಂಪಿ ಕೋವಿಡ್ ವರದಿ ಪ್ರಕಾರ ನಗರದಲ್ಲಿ ಒಟ್ಟು ಸಕ್ರಿಯ 18 ಕಂಟೈನ್ಮೆಂಟ್ ಝೋನ್‌ಗಳಿವೆ. ನಗರದ 7,14,046 ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ದ್ವಿತೀಯ ಸಂಪರ್ಕಿತ 8,49,611 ಜನರನ್ನು ಗುರುತಿಸಲಾಗಿದೆ. ನಗರದಲ್ಲಿ 18,44,379 ಜನರಿಗೆ ಕೊರೋನ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪಾಸಿಟಿವ್ ಪ್ರಮಾಣ ಶೇ.13.88ರಷ್ಟಿದೆ. ಕೊರೋನಕ್ಕೆ ಮೃತರಾಗುತ್ತಿರುವ ಪ್ರಮಾಣ ಶೇ.1.23ರಷ್ಟಿದ್ದು, ಗುಣಮುಖರಾಗುತ್ತಿರುವ ಪ್ರಮಾಣ ಶೇ.77.32ರಷ್ಟಿದೆ.