ಅ.13ರಿಂದ ಎಲೆಕ್ಟ್ರಿಕ್ ಬಸ್ ಗಳ ಪ್ರಾಯೋಗಿಕ ಸಂಚಾರ

Update: 2020-10-07 17:50 GMT

ಬೆಂಗಳೂರು, ಅ.7: ಬಿಎಂಟಿಸಿಯ 12 ಮೀಟರ್ ಉದ್ದದ ನಾಲ್ಕು ಎಲೆಕ್ಟ್ರಿಕ್ ಬಸ್‍ಗಳು ಅ.13ರಿಂದ ಪ್ರಯೋಗದ ಭಾಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿವೆ.

ಪ್ರಾಯೋಗಿಕವಾಗಿ ಸಂಚರಿಸಲಿರುವ ಎಲೆಕ್ಟ್ರಿಕ್ ಬಸ್ಸಿನಲ್ಲಿ 37 ಆಸನಗಳ ಸಾಮರ್ಥ್ಯವಿದ್ದು, ಅದನ್ನ 60 ಸೀಟುಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.ನಗರದಲ್ಲಿ ಒಂದು ತಿಂಗಳವರೆಗೆ ಟ್ರಯಲ್ ರನ್ ನಡೆಯಲಿದ್ದು, ಆರಂಭದಲ್ಲಿ ಮರಳು ಚೀಲಗಳನ್ನು ಪ್ರಯಾಣಿಕರ ಜಾಗದಲ್ಲಿ ಇರಿಸಲಾಗುತ್ತದೆ.

ಕೇಂದ್ರದ ಭಾರಿ ಕೈಗಾರಿಕೆಗಳ ಸಚಿವಾಲಯವು ಫೇಮ್ ಇಂಡಿಯಾ ಯೋಜನೆಯಡಿ ಕರ್ನಾಟಕದಲ್ಲಿ 400 ಇ-ಬಸ್‍ಗಳನ್ನು ಕಾರ್ಯಾಚರಣೆಗೊಳಿಸಲು ಸಬ್ಸಿಡಿ ನೀಡುತ್ತಿದೆ. ಇದರಲ್ಲಿ 300 ಬಸ್‍ಗಳು ರಾಜಧಾನಿಗೆ ಲಭಿಸಿವೆ. ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್ ಬಸ್‍ಗಳನ್ನು ಪಡೆದು ಕಾರ್ಯಾಚರಣೆಗೊಳಿಸುವ ಶರತ್ತಿನ ಮೇಲೆ ಕೇಂದ್ರವು ಸಬ್ಸಿಡಿ ನೀಡುತ್ತಿದೆ. ಹೀಗಾಗಿ, ಬಿಎಂಟಿಸಿಯು ಎರಡು ಬಾರಿ ಟೆಂಡರ್ ಆಹ್ವಾನಿಸಿತ್ತು. ಮೊದಲ ಸಲ ಪ್ರತಿ ಕಿ.ಮೀ. ಗೆ 105 ರೂ. ನಮೂದಿಸಿ ಕಂಪೆನಿಗಳು ಬಿಡ್ ಸಲ್ಲಿಸಿದ್ದವು.

ಹೈದರಾಬಾದ್ ಮೂಲದ ಒಲೆಕ್ಟ್ರಾ ಕಂಪನಿಯು ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್ ಅನ್ನು ಓಡಿಸಲಿದೆ. ಇದಕ್ಕಾಗಿ ಮೆಜೆಸ್ಟಿಕ್ ಡಿಪೋ 7ರಲ್ಲಿ ಚಾಜಿರ್ಂಗ್ ಘಟಕವನ್ನು ಸ್ಥಾಪಿಸಲಾಗಿದೆ. ಎರಡನೇ ಸಲ ಕರೆದಿದ್ದ ಟೆಂಡರ್‍ನಲ್ಲಿ ಭಾಗವಹಿಸಿದ್ದ ಒಲೆಕ್ಟ್ರಾ ಕಂಪೆನಿ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‍ಗಳಿಗೆ ಪ್ರತಿ ಕಿ.ಮೀ. ಗೆ 89.64 ರೂ. ನಮೂದಿಸಿ ಬಿಡ್ ಸಲ್ಲಿಸಿತ್ತು. ದರ ಸಂಧಾನದ ಬಳಿಕ 69 ರೂ. ಗಳಿಗೆ ಒಪ್ಪಿಕೊಂಡಿತ್ತು. ಇದು ಕೂಡ ದುಬಾರಿ ಎನಿಸಿದ್ದರಿಂದ ರದ್ದುಪಡಿಸಲಾಯಿತು.

ಇದಲ್ಲದೆ, ಕೆಂಗೇರಿ ಮತ್ತು ಯಶವಂತಪುರ ಡಿಪೋದಲ್ಲೂ ಚಾಜಿರ್ಂಗ್ ಘಟಕವನ್ನು ಅಳವಡಿಸಲು ತೀರ್ಮಾನಿಸಲಾಗಿದೆ. 15 ದಿನಗಳ ಕಾಲ ಮರಳಿನ ಮೂಟೆಗಳನ್ನು ಬಸ್ಸಿನಲ್ಲಿ ಇರಿಸಿ ಸಂಚರಿಸುವ ಮೂಲಕ ಕಾರ್ಯಕ್ಷಮತೆ ಪರಿಶೀಲಿಸಲಾಗುತ್ತದೆ. ಆನಂತರ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಅದರ ಸಾಮರ್ಥ್ಯ ಮತ್ತು ಒಮ್ಮೆ ಚಾರ್ಜಿಂಗ್ ಮಾಡಿದ ಬಳಿಕ ಎಷ್ಟು ಕಿ.ಮೀ. ಸಂಚರಿಸುತ್ತದೆ ಎಂಬುದನ್ನು ಪರೀಕ್ಷಿಸಲು ಉದ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News