ಮಿಚಿಗನ್ ಗವರ್ನರ್ ಅಪಹರಣ ಯತ್ನ : 13 ಮಂದಿ ಸೆರೆ

Update: 2020-10-09 04:01 GMT

ವಾಷಿಂಗ್ಟನ್: ಅಮೆರಿಕದ ಮಿಚಿಗನ್ ರಾಜಧಾನಿಯ ಸ್ಟೇಟ್ ಕ್ಯಾಪಿಟೋಲ್ ಸಂಕೀರ್ಣದ ಮೇಲೆ ದಾಳಿ ನಡೆಸಿ, ಅರಾಜಕತೆ ಸೃಷ್ಟಿಸಿ ಗವರ್ನರ್ ಅವರನ್ನು ಅಪಹರಿಸುವ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಈ ಸಂಬಂಧ ವೊಲ್ವೆರೈನ್ ವಾಚ್‌ಮೆನ್ ಮಿಲಿಶಿಯಾ ಸಂಘಟನೆಯ ಜತೆ ಸಂಪರ್ಕ ಹೊಂದಿದ್ದ ಏಳು ಮಂದಿ ಸೇರಿದಂತೆ 13 ಆರೋಪಿಗಳನ್ನು ಬಂಧಿಸಲಾಗಿದೆ.

ಡೆಮಾಕ್ರಟಿಕ್ ಪಕ್ಷಕ್ಕೆ ಸೇರಿದ ಗವರ್ನರ್ ಗ್ರೆಚಿನ್ ವಿಥ್ಮೆರ್ ಅವರನ್ನು ಅಪಹರಿಸಲು ಗುಂಪು ಉದ್ದೇಶಿಸಿತ್ತು ಎಂದು ಪ್ರಕರಣ ದಾಖಲಿಸಲಾಗಿದೆ.

ಕೊರೋನ ವೈರಸ್ ಸಾಂಕ್ರಾಮಿಕ ಸ್ಥಿತಿ ನಿಭಾಯಿಸುವಲ್ಲಿ ರಿಪಬ್ಲಿಕನ್ ಪಕ್ಷದ ಟ್ರಂಪ್ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಮಿಥ್ಮೆರ್ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದರು. ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಇದೀಗ ರಾಜಕೀಯ ಲೇಪ ಪಡೆದುಕೊಂಡಿದೆ.

ಒಂದು ಹಂತದಲ್ಲಿ ಈ ಸಂಚುಕೋರರು 200 ಮಂದಿಯ ಪಡೆಯನ್ನು ನೇಮಕ ಮಾಡಿಕೊಂಡು, ಲಾನ್‌ಸಿಂಗ್‌ನಲ್ಲಿರುವ ಸ್ಟೇಟ್ ಕ್ಯಾಪಿಟೋಲ್ ಮೇಲೆ ದಾಳಿ ಮಾಡಿ ಗವರ್ನರ್ ಅವರನ್ನು ಒತ್ತೆಯಾಳಾಗಿ ಸೆರೆಹಿಡಿಯುವ ಸಂಚು ರೂಪಿಸಿದ್ದರು. ಆದರೆ ಬಳಿಕ ಈ ಯೋಜನೆ ಕೈಬಿಟ್ಟು, ವಿಥ್ಮೆರ್ ಅವರನ್ನು ಅವರ ರಜಾಕಾಲದ ನಿವಾಸದಿಂದ ಅಪಹರಿಸುವ ಸಂಚು ಹೂಡಿತು ಎಂದು ವಿವರಿಸಲಾಗಿದೆ.

ಇಂಥ ತೀವ್ರಗಾಮಿಗಳ ಗುಂಪನ್ನು ಟ್ರಂಪ್ ಪ್ರಚೋದಿಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿಥ್ಮೆರ್ ಗಂಭೀರ ಆರೋಪ ಮಾಡಿದರು.

ಇತ್ತೀಚೆಗೆ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅವರ ಜತೆಗಿನ ಚರ್ಚೆ ವೇಳೆ, ಬಿಳಿಯರೇ ಶ್ರೇಷ್ಠ ಎಂಬ ಪ್ರವೃತ್ತಿಯನ್ನು ಟ್ರಂಪ್ ಖಂಡಿಸದಿರುವುದು ಆಕ್ಷೇಪಾರ್ಹ ಎಂದು ಹೇಳಿದರು. ಆದರೆ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕೆಲಿಗ್ ಮೆಕ್ಯಾನಿ ಈ ಆರೋಪವನ್ನು ಅಲ್ಲಗಳೆದಿದ್ದು, ಟ್ರಂಪ್ ಎಲ್ಲ ಬಗೆಯ ದ್ವೇಷವನ್ನು ಖಂಡಿಸುತ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News