×
Ad

ಐ-ಪ್ಯಾಡ್‍ಗಳನ್ನು ಹಿಂದುರುಗಿಸುವಂತೆ ಮಾಜಿ ಕಾರ್ಪೋರೇಟರ್ ಗಳಿಗೆ ಸೂಚನೆ

Update: 2020-10-09 20:16 IST

ಬೆಂಗಳೂರು, ಅ.9: ಬಿಬಿಎಂಪಿಯ ಸುತ್ತೋಲೆಗಳು, ಕೌನ್ಸಿಲ್ ಸಭೆಯ ಚರ್ಚೆಯ ವಿಷಯಗಳು, ನಿರ್ಣಯದ ಪ್ರತಿಗಳನ್ನು ಪಾಲಿಕೆ ಸದಸ್ಯರಿಗೆ ತಲುಪಿಸುವ ಸಲುವಾಗಿ ಪ್ರತೀ ಪಾಲಿಕೆ ಸದಸ್ಯರಿಗೆ 44 ಸಾವಿರ ರೂ ಮೌಲ್ಯದ ಐ-ಪ್ಯಾಡ್‍ಗಳನ್ನು ಈ ಹಿಂದೆ ನೀಡಲಾಗಿತ್ತು. ಇದೀಗ ಮಾಜಿ ಕಾರ್ಪೋರೇಟರ್ ಗಳು ಈ ಐ-ಪ್ಯಾಡ್‍ಗಳನ್ನು ಹಿಂದಿರುಗಿಸಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದೆ.

2018-19ನೇ ಸಾಲಿನಲ್ಲಿ ಕಾರ್ಪೋರೇಟರ್ ಗಳಿಗೆ ಆಪಲ್ ಐ-ಪ್ಯಾಡ್‍ಗಳನ್ನು ನೀಡಲಾಗಿತ್ತು. ಆಗ ಪ್ರತಿಪಕ್ಷ ನಾಯಕರಾಗಿದ್ದ ಪದ್ಮನಾಭ ರೆಡ್ಡಿಯವರನ್ನು ಹೊರತುಪಡಿಸಿ, 197 ಪಾಲಿಕೆ ಸದಸ್ಯರು ಹಾಗೂ 20 ಮಂದಿ ನಾಮ ನಿರ್ದೇಶಿತ ಸದಸ್ಯರು ಈ ಸವಲತ್ತನ್ನು ಪಡೆದುಕೊಂಡಿದ್ದರು. ಈಗ ಪಾಲಿಕೆ ಸದಸ್ಯರ ಅವಧಿ ಮುಗಿದಿದ್ದು, ಆಯುಕ್ತರ ಸೂಚನೆಯಂತೆ ಬಿಬಿಎಂಪಿಗೆ ಐ-ಪ್ಯಾಡ್‍ಗಳನ್ನು ಹಿಂದಿರುಗಿಸುವಂತೆ ಪಾಲಿಕೆ ಸದಸ್ಯರಿಗೆ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ. ನೋಟಿಸ್ ತಲುಪಿದ ಮೂರು ದಿನದೊಳಗೆ ಐ-ಪ್ಯಾಡ್‍ಗಳನ್ನು ವಾಪಸ್ ಮಾಡಿ, ಸ್ವೀಕೃತಿ ಪತ್ರ ಪಡೆಯುವಂತೆ ಸೂಚಿಸಲಾಗಿದೆ.

ಈಗ ವಾಪಸ್ ಪಡೆದ ಐ-ಪ್ಯಾಡ್‍ಗಳನ್ನು ಮುಂದೆ ಬರುವ ಪಾಲಿಕೆ ಸದಸ್ಯರಿಗೆ ನೀಡಲು ಅಗತ್ಯ ಕ್ರಮವಹಿಸುವಂತೆ ಕೌನ್ಸಿಲ್ ಕಾರ್ಯದರ್ಶಿಗೆ ತಿಳಿಸಲಾಗಿದೆ. ತಲಾ 44 ಸಾವಿರ ಮೌಲ್ಯದ, ಒಟ್ಟು 99 ಲಕ್ಷ ರೂ ಖರ್ಚು ಮಾಡಿ, ದುಬಾರಿ ಐಪ್ಯಾಡ್‍ಗಳನ್ನು ಕಿಯೋನಿಕ್ಸ್‍ನಿಂದ ಖರೀದಿಸಿ, ಬಜೆಟ್ ಮಂಡಿಸಿದ ಮರು ದಿನವೇ ವಿತರಣೆ ಮಾಡಲಾಗಿತ್ತು. 2018-19ನೇ ಸಾಲಿನ ಆಯವ್ಯಯಕ್ಕೆ ಅನುಮೋದನೆ ಪಡೆಯದೆಯೇ ಬಜೆಟ್ ಮರುದಿನ ತರಾತುರಿಯಲ್ಲಿ ಇವುಗಳನ್ನು ನೀಡಿದ್ದಕ್ಕೆ ಸಾಕಷ್ಟು ವಿರೋಧವೂ ಈ ಹಿಂದೆ ಕೇಳಿಬಂದಿತ್ತು.

ಕಾರ್ಪೋರೇಟರ್ ಗಳ ಉಪಯೋಗಕ್ಕಾಗಿ ಈ ಐ-ಪ್ಯಾಡ್‍ಗಳನ್ನು ನೀಡಲಾಗಿತ್ತು. ಆದರೆ ಯಾವೋರ್ವ ಕಾರ್ಪೋರೇಟರ್ ಸಹ ಈ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸದೆ ಮೂಲೆಗುಂಪು ಮಾಡಿದ್ದರು. ಇದೀಗ ಸೆಪ್ಟೆಂಬರ್ 10 ಕ್ಕೆ ಅವಧಿ ಮುಗಿದಿದ್ದು, ಯಾವ ಕಾರ್ಪೋರೇಟರ್ ಸಹ ಐಪ್ಯಾಡ್ ಹಿಂದಿರುಗಿಸದ ಕಾರಣ ನೋಟೀಸ್ ನೀಡಲು ಬಿಬಿಎಂಪಿ ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News