ರಾಜರಾಜೇಶ್ವರಿ ನಗರ ಚುನಾವಣೆ: ನಿಷೇಧಾಜ್ಞೆ ಜಾರಿ

Update: 2020-10-09 16:46 GMT

ಬೆಂಗಳೂರು, ಅ.9: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಚುನಾವಣಾ ಪ್ರಕ್ರಿಯೆ ಅ.29 ರಿಂದ ನ.12ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕಾಯ್ದೆ ಜಾರಿಯಾಗಲಿದೆ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳ ಕಚೇರಿ ನಂ.211ರಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ, ಅಭ್ಯರ್ಥಿಗಳ ಬೆಂಬಲಿಗರು ಕೋವಿಡ್ ನಿಯಮ ಉಲ್ಲಂಘಿಸಿ ಕಚೇರಿ ಬಳಿ ಗುಂಪು ಸೇರುವುದು, ರಸ್ತೆ ತಡೆ, ಮೆರವಣಿಗೆ ಮುಂತಾದ ಘಟನೆಗಳು ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಅದೇ ರೀತಿ, ನಾಮಪತ್ರ ಸಲ್ಲಿಸುವ ಕಚೇರಿ ಸುತ್ತ 100 ಮೀಟರ್ ವ್ಯಾಪ್ತಿಗೆ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಲಾಗಿದೆ. ಒಂದು ವೇಳೆ 144 ಸೆಕ್ಷನ್ ಉಲ್ಲಂಘನೆ ಮಾಡಿ 5 ಅಥವಾ ಅದಕ್ಕಿಂತ ಹೆಚ್ಚು ಜನ ಸೇರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News