ಆಶ್ರಯ ಕೇಂದ್ರದ ಕುರಿತ ನಿರ್ದೇಶನ : ಮಕ್ಕಳ ಹಕ್ಕು ಅಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆ
ಹೊಸದಿಲ್ಲಿ, ಅ.9: ಮಕ್ಕಳ ಆಶ್ರಯ ಕೇಂದ್ರದ ವಿಷಯದಲ್ಲಿ ನೀಡಿದ್ದ ನಿರ್ದೇಶನದ ಬಗ್ಗೆ ಪ್ರತಿಕ್ರಿಯಿಸುವಂತೆ ಮಕ್ಕಳ ಹಕ್ಕು ರಕ್ಷಣೆಯ ರಾಷ್ಟ್ರೀಯ ಆಯೋಗ(ಎನ್‌ಸಿಪಿಸಿಆರ್)ಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಆಶ್ರಯ ಕೇಂದ್ರದಲ್ಲಿರುವ ಮಕ್ಕಳನ್ನು ಅವರ ಮನೆಗೆ ತಲುಪಿಸುವಂತೆ ಸೆಪ್ಟಂಬರ್ 24ರಂದು 8 ರಾಜ್ಯಗಳಿಗೆ ಎನ್‌ಸಿಪಿಸಿಆರ್ ನಿರ್ದೇಶಿಸಿತ್ತು.
ಕೌಟುಂಬಿಕ ವಾತಾವರಣದಲ್ಲಿ ಬೆಳೆಯುವುದು ಎಲ್ಲಾ ಮಕ್ಕಳ ಹಕ್ಕಾಗಿದೆ ಎಂದು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಿಝೋರಾಂ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಮೇಘಾಲಯ ರಾಜ್ಯಗಳಿಗೆ ಪತ್ರ ಬರೆದಿತ್ತು. ದೇಶದಲ್ಲಿ ಆಶ್ರಯ ಕೇಂದ್ರಗಳಲ್ಲಿ ವಾಸಿಸುವ ಒಟ್ಟು ಮಕ್ಕಳಲ್ಲಿ ಸುಮಾರು 72 ಶೇ. (2.56 ಲಕ್ಷದಲ್ಲಿ 1.84 ಲಕ್ಷ) ಮಕ್ಕಳು ಈ 8 ರಾಜ್ಯಗಳ ಆಶ್ರಯ ಕೇಂದ್ರದಲ್ಲಿದ್ದಾರೆ. ಆದರೆ ಕೊರೋನ ಸೋಂಕು ಇನ್ನೂ ಕಡಿಮೆಯಾಗದ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಈ ನಿರ್ದೇಶನವನ್ನು ನೀಡಲು ಇದು ಸಕಾಲವಲ್ಲ ಎಂದು ಪ್ರಕರಣದಲ್ಲಿ ನ್ಯಾಯಾಲಯದ ಸಲಹೆಗಾರನಾಗಿ ನಿಯುಕ್ತಿಗೊಂಡಿರುವ ಹಿರಿಯ ನ್ಯಾಯವಾದಿ ಗೌರವ್ ಅಗರವಾಲ್ ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರಾದ ಎಲ್. ನಾಗೇಶ್ವರ ರಾವ್, ಹೇಮಂತ್ ಗುಪ್ತಾ ಹಾಗೂ ಅಜಯ್ ರಸ್ತೋಗಿ ಅವರಿದ್ದ ನ್ಯಾಯಪೀಠ, ಸೆಪ್ಟಂಬರ್ 24ರ ನಿರ್ದೇಶನದ ಬಗ್ಗೆ ಪ್ರತಿಕ್ರಿಯಿಸುವಂತೆ ಎನ್‌ಸಿಪಿಸಿಆರ್‌ಗೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ.