ಮಿಂಟೋ ಆಸ್ಪತ್ರೆ: ಚಿಕಿತ್ಸೆ ಬಳಿಕ ವಾಸದ ಅವಧಿ ಕಡಿತ
ಬೆಂಗಳೂರು, ಅ.9: ಕೊರೋನ ಕಾರಣದಿಂದ ಮಿಂಟೋ ಆಸ್ಪತ್ರೆಯಲ್ಲಿ ಡೇ ಕೇರ್ ಮಾದರಿ ಸೇವೆ ನೀಡಲಾಗುತ್ತಿದ್ದು, ಕಣ್ಣಿನ ಸಮಸ್ಯೆಯುಳ್ಳವರಿಗೆ ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆ ವಾಸದ ಅವಧಿಯನ್ನು ಕಡಿತ ಮಾಡಲಾಗಿದೆ.
ಪ್ರಸ್ತುತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಉಳಿದ ಶಸ್ತ್ರಚಿಕಿತ್ಸೆಗಳನ್ನು ಅಲ್ಲಿ ನಡೆಸಲಾಗುತ್ತಿದೆ. ಆದರೆ, ಮಾಹಿತಿ ಕೊರತೆ ಹಾಗೂ ಕೋವಿಡ್ ಕಾರಣ ಶಸ್ತ್ರಚಿಕಿತ್ಸೆ ಬರುವವರ ಸಂಖ್ಯೆ ಸದ್ಯ ಬೆರಳಣಿಕೆಯಷ್ಟಿದೆ. ಒಂದು ವಾರದಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಹೊರ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದು, ದಿನವೊಂದಕ್ಕೆ ಭೇಟಿ ನೀಡಿದವರ ಸಂಖ್ಯೆ 300ಕ್ಕೆ ಏರಿಕೆಯಾಗಿದೆ. ಈ ಹಿಂದೆ ಪ್ರತಿನಿತ್ಯ ಸರಾಸರಿ 600ರಿಂದ 800 ಹೊರ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು.
ರೋಗಿಗೆ ಕೋವಿಡ್ ಪರೀಕ್ಷೆ ನಡೆಸಿ, ವರದಿ ಬಂದ 24 ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಬಳಿಕ 24 ಗಂಟೆ ಅವರ ಸ್ಥಿತಿ ಗಮನಿಸಿ, ಮನೆಗೆ ಕಳುಹಿಸಲಾಗುತ್ತದೆ. ರೋಗಿಗಳು ಗ್ರಾಮೀಣ ಭಾಗದಿಂದ ಬರುತ್ತಾರೆ ಎಂಬ ಕಾರಣಕ್ಕೆ ಈ ಹಿಂದೆ ಹೆಚ್ಚಿನ ಸಮಯ ಇರಿಸಿಕೊಳ್ಳಲಾಗುತ್ತಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಅವಧಿ ಆಸ್ಪತ್ರೆಯಲ್ಲಿ ಇರಿಸಿಕೊಳ್ಳುವುದು ಕಷ್ಟ. ಹೀಗಾಗಿ, ಮನೆಗೆ ಕಳುಹಿಸಿದ ಬಳಿಕ ಅವರ ಆರೋಗ್ಯದ ಸ್ಥಿತಿಗತಿಯ ಬಗ್ಗೆ ನಿಗಾ ಇರಿಸಲಾಗುವುದು ಎಂದು ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದ್ದಾರೆ.
ದಿನಕ್ಕೆ 10ರಿಂದ 20 ಶಸ್ತ್ರಚಿಕಿತ್ಸೆ: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಎರಡರಿಂದ ಮೂರು ದಿನಗಳಲ್ಲಿ ಪ್ರಾರಂಭ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸಲು ಸಾಕಷ್ಟು ತಯಾರಿ ನಡೆಸಬೇಕಾಗಿದೆ. ಆಸ್ಪತ್ರೆಯಲ್ಲಿ 8 ಶಸ್ತ್ರಚಿಕಿತ್ಸೆ ಘಟಕಗಳಿವೆ. ಒಂದು ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮೊದಲಿನಂತೆ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ. ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛಪಡಿಸಿಕೊಳ್ಳಬೇಕಾಗುತ್ತದೆ. ಕನಿಷ್ಠ 20 ನಿಮಿಷ ಬಿಡುವು ಬೇಕಾಗುತ್ತದೆ. ಹಾಗಾಗಿ ಮೊದಲಿನಂತೆ ದಿನಕ್ಕೆ ಸರಾಸರಿ 50 ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ. 10ರಿಂದ 20 ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ ಎಂದು ಡಾ. ಸುಜಾತಾ ರಾಥೋಡ್ ಹೇಳಿದ್ದಾರೆ.