ಕಾರ್ಮೋಡ ಕವಿದ ವಾತಾವರಣದಲ್ಲಿ ಹುಟ್ಟುವ ಆಶಾ ಜಗದೀಶ್ ಕತೆಗಳು

Update: 2020-10-10 19:30 GMT

‘ಮಳೆ ಮತ್ತು ಬಿಳಿ ಬಟ್ಟೆ’ ಆಶಾ ಜಗದೀಶ್ ಅವರ ಮೊದಲ ಸಣ್ಣಕತಾ ಸಂಕಲನ. ಇದರಲ್ಲಿ ಓದುಗರನ್ನು ಬಿಡದೆ ಕಾಡಬಲ್ಲ 13 ಕತೆಗಳಿವೆ. ಎಲ್ಲ ಕತೆಗಳೂ ಒಂದಿಲ್ಲೊಂದು ರೀತಿಯಲ್ಲಿ ಸಾಂಪ್ರದಾಯಿಕ ನಂಬಿಕೆ ಮತ್ತು ಆಚರಣೆಗಳ ಅಕ್ಟೋಪಸ್ ಹಿಡಿತದಿಂದ ಇನ್ನೂ ಹೊರಗೆ ಬಾರದೆ ಮುಗ್ಧ ಜನರು ತೊಳಲಾಡುತ್ತಿರುವ ಶೋಚನೀಯ ಚಿತ್ರಗಳನ್ನು ನೀಡುತ್ತವೆ. ಹೆಚ್ಚಿನ ಕತೆಗಳು ಸ್ತ್ರೀ ಕೇಂದ್ರಿತವಾಗಿದ್ದು ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಸ್ತ್ರೀಯು ಪುರುಷನಿಗಿಂತ ನಿಕೃಷ್ಟಳೆಂಬ ಭಾವನೆಯಿಂದ ಬೆಳೆಸಿಕೊಂಡ ನೂರಾರು ರೀತಿಯ ಪೂರ್ವಗ್ರಹಗಳಿಂದಾಗಿ ಸಂಭವಿಸುವ ದುರಂತಗಳನ್ನು ಚಿತ್ರಿಸುತ್ತವೆ. ಇನ್ನು ಕೆಲವು ಬಡತನದ ಬವಣೆ, ವಿಧಿ ವೈಚಿತ್ರ್ಯಗಳನ್ನು ಚಿತ್ರಿಸುತ್ತದೆ. ಗ್ರಾಮೀಣ ಬದುಕಿನ ಸಶಕ್ತ ಚಿತ್ರಣವು ಸಂಕಲನದ ಸೌಂದರ್ಯಕ್ಕೆ ಪುಟವಿಟ್ಟಿದೆ.

ಮೊದಲ ಕತೆಯೇ ಇಲ್ಲಿ ಶೀರ್ಷಿಕೆಯ ಕತೆ. ಇದು ಒಂದು ಕನಸಿನ ಅಸ್ಪಷ್ಟ ದೃಶ್ಯದೊಂದಿಗೆ ಆರಂಭವಾಗುತ್ತದೆ. ಕುಟುಂಬದೊಳಗಿನ ಬದುಕಿನಲ್ಲಿ ತಾನು ಒಂಟಿ ಎಂಬ ಭಾವನೆಯಿಂದ ಸಾಯಬೇಕು ಅಂದುಕೊಳ್ಳುತ್ತ ತಾನು ಸತ್ತರೆ ಗಂಡ-ಮಕ್ಕಳ ಪ್ರತಿಕ್ರಿಯೆ ಹೇಗಿರಬಹುದು ಎಂದು ಕಲ್ಪಿಸಿಕೊಳ್ಳುತ್ತ ತಾನು ಇಲ್ಲದಿದ್ದರೂ ಬದುಕು ಎಂದಿನಂತೆ ಸಾಗೀತು, ಆದರೆ ಅವರನ್ನು ನಡುನೀರಿನಲ್ಲಿ ಬಿಟ್ಟು ಹೋಗುವುದು ತನ್ನಿಂದ ಸಾಧ್ಯವೇ ಅಂದುಕೊಳ್ಳುತ್ತಾಳೆ. ಆದರೆ ಅವಳ ಕವಯಿತ್ರಿ ಗೆಳತಿಯ ಸಾವಿನ ಸುದ್ದಿ ಅವಳಲ್ಲಿ ಇನ್ನಷ್ಟು ಹತಾಶ ಭಾವವನ್ನೂ ಹುಟ್ಟಿಸುತ್ತದೆ. ಹೀಗೆ ಬದುಕಿನ ಸೆಳೆತ ಮತ್ತು ಸಾಯಬೇಕೆಂಬ ತುಡಿತಗಳ ನಡುವಣ ಸಂಘರ್ಷದೊಂದಿಗೆ ಕತೆ ನಿಗೂಢ ಶೈಲಿಯ ನಿರೂಪಣೆಯೊಂದಿಗೆ ಸಾಗುತ್ತದೆ. ಸಾವಿನ ಬಿಳಿ ಬಟ್ಟೆಯನ್ನು ಮತ್ತೆ ಮತ್ತೆ ಸುರಿಯುವ ಮಳೆ ಒದ್ದೆಗೊಳಿಸುತ್ತಲೇ ಇರುತ್ತದೆ.

‘ಬೇಲಿ’ ಕತೆ ತನ್ನ ಹೆಣ್ಣುಮರುಳ ಗಂಡನಿಂದ ವಂಚನೆಗೊಳಗಾಗಿ ತನ್ನ ಸುತ್ತಣ ಸಮಾಜ ಹಾಕಿದ ಕಟ್ಟುಪಾಡುಗಳ ಬೇಲಿಯೊಳಗೆ ಸಿಲುಕಿ ಹೊರಬರಲಾರದೆ ಅಲ್ಲಿ ಇರಲೂ ಆಗದೆ ಕತಾನಾಯಕಿ ಸಂಕಟ ಪಡುವ ಕತೆ. ತನ್ನ ಗಂಡನ ಬಗ್ಗೆ ತಿಳಿಯದೆಯೇ ಅವಳು ತನ್ನ ಗೆಳತಿಯರ ಪ್ರೇಮ ವ್ಯವಹಾರಗಳ ಬಗ್ಗೆ ಅನುಮಾನಿಸುತ್ತಾಳೆ. ಇದಕ್ಕೆ ಕಾರಣ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಸದಾ ಅನುಮಾನ ಪಡುವ ಸಮಾಜದಲ್ಲಿ ಅವಳು ಬೆಳೆದು ಬಂದುದು. ಹೆಣ್ಣು ಹೆಣ್ಣನ್ನೇ ಅನುಮಾನಿಸುವ ಬಗ್ಗೆ ಅವಳಿಗೇ ಜುಗುಪ್ಸೆಯೆನ್ನಿಸುತ್ತದೆ. ಕೊನೆಯಲ್ಲಿ ತನ್ನ ಗೆಳತಿ ಜಯಶ್ರೀ ತನ್ನ ಮಗಳ ಜತೆಗೆ ಖುಷಿಯಿಂದ ಹೋಗುವುದನ್ನು ಕಂಡು ಅವಳಿಗೆ ಸಮಾಧಾನವಾಗುತ್ತದೆ.

‘ದಾಹ’ ಒಂದು ಕೌಟುಂಬಿಕ ಕತೆಯಾದರೂ ಪ್ರಾಯಶಃ ಇದು ಎಲ್ಲೆಡೆ ನಡೆಯುವಂತಹದ್ದೇ. ಕುಟುಂಬಕ್ಕಾಗಿ, ಮಕ್ಕಳಿಗಾಗಿ ತನ್ನ ಸರ್ವಸ್ವವನ್ನು ನೀಡುತ್ತ, ತನ್ನ ಸ್ವಂತ ಸುಖವನ್ನು ಬದಿಗಿಟ್ಟು ಮಕ್ಕಳು ಚೆನ್ನಾಗಿರಬೇಕು ಎಂದು ಹೆಣಗಾಡುವ ಒಬ್ಬ ತಾಯಿ ಇಲ್ಲಿದ್ದಾಳೆ. ಕತಾ ನಿರೂಪಕಿಗೂ ಅಮ್ಮನ ಬಗ್ಗೆ ಅಪಾರವಾದ ಕಾಳಜಿಯಿರುತ್ತದೆ. ಆದರೆ ಅಮ್ಮನಿಂದ ಉಪಕೃತರಾದ ಎಲ್ಲ ಮಕ್ಕಳೂ ಅಮ್ಮ ಸತ್ತಾಗ ಅವಳ ಸೀರೆ-ಒಡವೆಗಳಿಗಾಗಿ ಜಗಳ ಮಾಡುತ್ತ ಎಲ್ಲವನ್ನೂ ಹರಿದು ಹಂಚಿಕೊಳ್ಳುವಷ್ಟು ಸ್ವಾರ್ಥಿಗಳಾಗುವುದನ್ನು ನೋಡುವಾಗ ಸಂಬಂಧಗಳ ಅರ್ಥವೇನು ದೇವರೇ? ಎಂದು ಕೇಳುವಂತಾಗುತ್ತದೆ.
‘ಬಳ್ಳಿ ತೊರೆವ ಮೊಗ್ಗು’ ಒಬ್ಬ ಹೆಣ್ಣಿನ ಅಸಹಾಯಕ ಸ್ಥಿತಿಯ ಕತೆ. ಬಡತನದ ಕಾರಣದಿಂದ ವಿಷಮ ವಿವಾಹಕ್ಕೆ ಕೊರಳೊಡ್ಡಬೇಕಾಗಿ ಬಂದ ಕಥಾನಾಯಕಿ ಬದುಕಿನಲ್ಲಿ ಅಪಾರವಾಗಿ ನೊಂದು ಜೀವವೇ ಬೇಡವೆಂದು ಅಂದುಕೊಳ್ಳುವ ಹೊತ್ತಿಗೆ ಮುಟ್ಟು ನಿಂತು ಗಾಬರಿಯಾಗುತ್ತಾಳೆ. ಏನು ಮಾಡುವುದೆಂದು ದಿಕ್ಕೇ ತೋಚದೆ ನಿಂತಿದ್ದಾಗ ಗೆಳತಿ ತಾರಕ್ಕ ಗುಟ್ಟಾಗಿ ಆಸ್ಪತ್ರೆಗೆ ಕರೆದೊಯ್ಯುವ ತಯಾರಿ ನಡೆಸುತ್ತಾಳೆ. ಆದರೆ ಅಷ್ಟರಲ್ಲಿ ನಿಸರ್ಗವೇ ಅವಳ ಸಮಸ್ಯೆಯನ್ನು ಪರಿಹರಿಸುತ್ತದೆ.

‘ಇಜ್ಜೋಡು’ ಎಂಬ ಕತೆಯೂ ವಿಷಮ ವಿವಾಹದಿಂದಾಗಿ ಹೆಣ್ಣೊಬ್ಬಳು ತೊಳಲಾಡುವ ಕತೆ. ಮಂಗಳಿ ಎಂಬ ಸಾಧು ಸ್ವಭಾವದ ಹೆಣ್ಣು ತನ್ನ ತಂದೆಯ ಬಡತನದ ಕಾರಣದಿಂದಾಗಿ ಶಿವಯ್ಯ ಎಂಬ ಮೊದ್ದು ಹುಡುಗನನ್ನು ಮದುವೆಯಾಗ ಬೇಕಾಗಿ ಬರುತ್ತದೆ. ಬುದ್ಧಿವಂತೆ ಮಂಗಳಿ ಎಸೆಸೆಲ್ಸಿಯಲ್ಲಿ ಫಸ್ಟ್ ಕ್ಲಾಸಿನಲ್ಲಿ ಪಾಸಾದವಳು, ಕಂಪ್ಯೂಟರ್ ತಿಳಿದವಳು, ದಡ್ಡನೂ ಸೋಮಾರಿಯೂ ಅಪ್ರಯೋಜಕನೂ ಆದ ಶಿವಯ್ಯನ ಹೆಂಡತಿಯಾಗಿ ಪಡಬಾರದ ಕಷ್ಟ ಪಡುತ್ತಾಳೆ. ಅಣ್ಣನ ಮೇಲಿನ ಸಿಟ್ಟಿಗೆ ಕುಡಿತ ಆರಂಭಿಸಿದ ಅವನು ತನ್ನ ಸಿಟ್ಟನ್ನು ತೆಗೆಯುವುದು ಮುಗ್ಧೆ ಮಂಗಳಿಯ ಮೇಲೆ. ಗಂಡ ಯಾವಾಗಲೂ ಹೆಂಡತಿಗಿಂತ ಮೇಲಿನವನಾಗಿರಬೇಕು ಎಂಬ ಸಮಾಜದ ನಂಬಿಕೆಗೆ ಮಂಗಳಿ ಬಲಿಯಾಗುತ್ತಾಳೆ. ಹೆಂಡತಿ ತನಗಿಂತ ಹೆಚ್ಚು ಕಲಿತವಳು, ಬುದ್ಧಿವಂತಳು ಎಂಬುದೇ ಒಂದು ಕಾರಣವಾಗಿ ಅವಳನ್ನು ಅವನು ಬಿಡುತ್ತಾನೆ. ಯಾವುದೋ ಒಂದು ಶಾಲೆಯಲ್ಲಿ ಕಂಪ್ಯೂಟರ್ ನಿರ್ವಹಿಸುವ ಕೆಲಸ ಸಿಕ್ಕಿ, ಅವಳು ಅಲ್ಲಿಗೆ ಹೋಗತೊಡಗಿದಾಗ ಸಹೋದ್ಯೋಗಿಯಾಗಿದ್ದ ಸಹೃದಯಿ ವ್ಯಕ್ತಿ ನೆಲ್ಸನ್ ಜತೆಗೆ ಅವಳಿಗೆ ಸಂಬಂಧವಿದೆ ಎಂಬ ಸುಳ್ಳು ಸುದ್ದಿಯನ್ನು ಊರ ಕಿಡಿಗೇಡಿಗಳೇ ಹಬ್ಬಿಸಿ ಅದು ಶಿವಯ್ಯನ ಅನುಮಾನದ ಬೆಂಕಿಗೆ ತುಪ್ಪಸುರಿಯುತ್ತದೆ. ಈ ಯಾವ ರಗಳೆಯೂ ಬೇಡವೆಂದು ಮಂಗಳಿ ಕ್ರೈಸ್ತ ಸನ್ಯಾಸಿನಿಯಾಗಿ ಬೆಂಗಳೂರಿನ ಆಶ್ರಮವೊಂದರಲ್ಲಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ. ಹೀಗೆ ಈ ಕತೆಯಲ್ಲಿ ಹೆಣ್ಣು ಕಷ್ಟಗಳನ್ನೆದುರಿಸಿದರೂ ಎದೆಗುಂದದೆ ತನ್ನ ಬದುಕನ್ನು ತಾನೇ ರೂಪಿಸಿಕೊಳ್ಳಲು ಶಕ್ತಳಾಗುತ್ತಾಳೆ.

‘ಅನಾದರ್ ಛಾನ್ಸ್’ ಕತೆಯಲ್ಲಿ ಒಂದು ವಿಲಕ್ಷಣ ಸನ್ನಿವೇಶವಿದೆ. ದಯಾ ಸನ್ವಿತಿಯನ್ನು ಪ್ರೀತಿಸಿದಾಗ ಅವಳಿಗೆ ಅವನಲ್ಲಿ ಪ್ರೀತಿ ಇಲ್ಲವಾದ್ದರಿಂದ ಅವಳು ಅವನ್ನು ನಯವಾಗಿ ನಿರಾಕರಿಸುತ್ತಾಳೆ. ಆನಂತರ ಅವಳು ತಾನು ಇಷ್ಟ ಪಟ್ಟ ಸೂರಜ್ ಜತೆಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಎರಡು ವರ್ಷ ಕಳೆಯುತ್ತಾಳೆ. ಅಷ್ಟರಲ್ಲಿ ಅವನ ಬಣ್ಣ ಬಯಲಾದಾಗ ಬೆಚ್ಚಿಬಿದ್ದು ದಯಾಗಾಗಿ ಪರಿತಪಿಸುತ್ತಾಳೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ. ಪ್ರೇಮನೈರಾಶ್ಯದಿಂದಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ದಯಾನನ್ನು ಬಹಳ ಹಿಂದಿನಿಂದಲೂ ಪ್ರೀತಿಸುತ್ತಿದ್ದ ಪ್ರಣತಿಯ ಪ್ರೀತಿಯು ಬಂಧಿಸಿಯಾಗಿರುತ್ತದೆ. ಇದು ಒಂದು ಸಾಮಾನ್ಯ ಕತೆಯಾದರೂ ನಿರೂಪಣೆ ಮತ್ತು ಒಳಸತ್ವ ಮನಮುಟ್ಟುವಂತಿದೆ. ಇಲ್ಲಿ ತಪ್ಪುಯಾರದ್ದೆಂದು ಸ್ಪಷ್ಟವಿಲ್ಲದಿದ್ದರೂ ಇಲ್ಲಿ ನಗರದ ಆಧುನಿಕ ಶೈಲಿಯ ಬದುಕನ್ನೇ ಆರೋಪಿಯನ್ನಾಗಿ ಚಿತ್ರಿಸಿದಂತೆ ಕಾಣುತ್ತದೆ. ‘ಉರುಳು’ ಎಂಬ ಕತೆಯಲ್ಲೂ ಸಮಾಜದ ರೀತಿ-ನೀತಿಗಳನ್ನು ಪ್ರಶ್ನಿಸಲಾಗಿದೆ. ಗಂಡು-ಹೆಣ್ಣುಗಳು ಮದುವೆಯಾಗುವುದು ಮಕ್ಕಳನ್ನು ಹುಟ್ಟಿಸಲು ಮಾತ್ರವೇ?, ಅವರಿಗೆ ತಮ್ಮ ವೈಯಕ್ತಿಕ ಬದುಕುಗಳನ್ನು ಬೇರೆಯೇ ಆದ ರೀತಿಯಲ್ಲಿ ರೂಪಿಸಿಕೊಳ್ಳಲು ವೈಯಕ್ತಿಕ ಸ್ವಾತಂತ್ರ್ಯವಿಲ್ಲವೇ? ಎಂಬ ಪ್ರಶ್ನೆಗಳು ನಿರೂಪಕಿಯನ್ನು ಕಾಡುತ್ತವೆ.

‘ಊರಿನಿಂದ ನೀರಿಗೆ’ ಉಳಿದ ಕತೆಗಳಿಗಿಂತ ಭಿನ್ನವಾಗಿದೆ. ಇದು ಕತೆಯಲ್ಲ. ಬಡತನವೇ ಮೈವೆತ್ತಂತಿರುವ ಒಂದು ಗುಂಪು ಗುಳೇ ಹೊರಟಿರುವ ಒಂದು ಸ್ತಬ್ಧ ಚಿತ್ರದಂತಿದೆ. ‘ಮಳೆಹನಿ ಮತ್ತು ತರಗೆಲೆ’ ಕೂಡಾ ಇದೇ ರೀತಿ ಭಿನ್ನ ದಾರಿಯಲ್ಲಿ ಸಾಗುವ ಒಂದು ಲಹರಿ. ಕಾವ್ಯಾತ್ಮಕವಾಗಿ ಸಾಗುವ ಈ ನಿರೂಪಣೆಯಲ್ಲಿ ಮಳೆಹನಿ ಯೌವನದ ಶಕ್ತಿಯಾಗಿಯೂ ತರಗೆಲೆಯನ್ನು ಸಾವು ಸಮೀಪಿಸುತ್ತಿರುವ ಓರ್ವ ವೃದ್ಧ ವ್ಯಕ್ತಿಯಾಗಿಯೂ ಚಿತ್ರಿಸಿದಂತಿದೆ.
ಎಲ್ಲ ಕತೆಗಳಲ್ಲೂ ಗ್ರಾಮೀಣ ಬದುಕಿನ ಎಳೆ ಎಳೆಯಾದ ಸುಂದರ ಚಿತ್ರಣಗಳಿವೆ. ಸೊಗಸಾದ ಆಡುಭಾಷೆಯ ಬಳಕೆ ಕತೆಗಳ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕತೆಗಳಲ್ಲಿ ಅಲ್ಲಲ್ಲಿ ಬಳಸಿದ ಕೆಲವು ಸಾಮಾನ್ಯ ಹೇಳಿಕೆಗಳು ಬಹಳ ಗಂಭೀರವೂ ಅರ್ಥಪೂರ್ಣವೂ ಆಗಿವೆ. ಒಂದೆರಡು ಉದಾಹರಣೆಗಳನ್ನು ಕೊಡುವುದಾದರೆ-

* ಹಳೆಯ ಪುಸ್ತಕಗಳು ತಮಗಿಂತಲೂ ಹಳೆಯದಾದ ಕಪಾಟುಗಳಲ್ಲಿ ಉಸಿರುಗಟ್ಟಿ ಸಾಯುವಂತೆ..(ಬೇಲಿ ಪು.13)

* ಸಮಾಜದ ಕಣ್ಣಿಗೆ ಇಂತಹ ಕೊರತೆಗಳು ಬಹು ಸುಲಭವಾಗಿ ಬೀಳುತ್ತವೆ ಮತ್ತು ಅವನ್ನದು ತನ್ನ ಅವಕಾಶವಾದಿತನಕ್ಕಾಗಿ ಸುಲಭವಾಗಿ ಬಳಸಿಕೊಂಡು ಬಿಡುತ್ತದೆ. ಮನೆಯ ಒಳಗಿನ-ಹೊರಗಿನ ಸಮಾಜ, ಮತ್ತದರ ರಾಜಕೀಯ ಸದಾ ದಮನಿಸಲು ಬಲಹೀನತೆಯನ್ನು ಹುಡುಕುತ್ತಿರುತ್ತದೆ .(ಬಳ್ಳಿ ತೊರೆವ ಮೊಗ್ಗು ಪು.37)

* ಚಾರಿತ್ರ್ಯ ಅನ್ನುವುದು ಎಷ್ಟು ವಿಚಿತ್ರ ನೋಡಿ. ಗಂಡಿನ ಚಾರಿತ್ರ್ಯ ಯಾವಾಗಲೂ ಪ್ರಶ್ನಾತೀತ ಮತ್ತು ಹೆಣ್ಣಿನ ಚಾರಿತ್ರ್ಯ ಸಂಶಯಾರ್ಹ.( ಇಜ್ಜೋಡು ಪು64)

ಇಂತಹ ಹಲವು ಉದಾಹರಣೆಗಳು ಲೇಖಕಿಯ ಗಂಭೀರ ಚಿಂತನೆಗೆ ಸಾಕ್ಷಿಯಾಗಿ ಈ ಕೃತಿಯಲ್ಲಿ ಸಿಗುತ್ತವೆ. ಆಶಾ ಅವರು ಮುಂದೆ ಕನ್ನಡದ ಮಹತ್ವದ ಕತೆಗಾರ್ತಿಯಾಗಬಲ್ಲರು ಅನ್ನುವುದನ್ನು ಇವು ಪುಷ್ಟೀಕರಿಸುತ್ತವೆ.

Writer - -ಪಾರ್ವತಿ ಐತಾಳ್

contributor

Editor - -ಪಾರ್ವತಿ ಐತಾಳ್

contributor

Similar News