ಪ್ರಶಸ್ತಿಯ ಸುತ್ತಿನಲ್ಲಿ ಜೊಕೊವಿಕ್- ನಡಾಲ್ ಮುಖಾಮುಖಿ

Update: 2020-10-10 18:31 GMT

 ಪ್ಯಾರಿಸ್: ಹನ್ನೆರಡು ಬಾರಿ ಫ್ರೆಂಚ್ ಓಪನ್ ಕಿರೀಟ ಧರಿಸಿರುವ ಸ್ಪೇನ್‌ನ ವರ್ಲ್ಡ್‌ನಂ.2 ಆಟಗಾರ ರಫೇಲ್ ನಡಾಲ್ ಮತ್ತು ವರ್ಲ್ಡ್ ನಂ.1. ಸರ್ಬಿಯದ ನೊವಾಕ್ ಜೊಕೊವಿಕ್ ರವಿವಾರ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ.

 ಹಾಲಿ ಚಾಂಪಿಯನ್ ನಡಾಲ್ ಅವರು ಸೆಮಿಫೈನಲ್‌ನಲ್ಲಿ ಸಾರ್ಟ್ಸ್‌ಮ್ಯಾನ್‌ರನ್ನು 6-3, 6-3, 7-6 (7/0) ಸೆಟ್‌ಗಳಿಂದ ಬಗ್ಗು ಬಡಿದು 13ನೇ ಬಾರಿ ಫ್ರೆಂಚ್ ಓಪನ್ ಫೈನಲ್ ತಲುಪಿದರು.

ಜೊಕೊವಿಕ್ ಅವರು ಸೆಮಿಫೈನಲ್‌ನಲ್ಲಿ ಗ್ರೀಕ್‌ನ ಐದನೇ ಶ್ರೇಯಾಂಕದ ಸ್ಟೆಫಾನೊಸ್ ಸಿಟ್ಸಿಪಾಸ್‌ರನ್ನು 6-3, 6-2, 5-7, 4-6, 6-1 ಸೆಟ್‌ಗಳಿಂದ ಸೋಲಿಸಿ ಐದನೇ ಬಾರಿ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದರು.

ಜೊಕೊವಿಕ್ ಮತ್ತು ನಡಾಲ್ 56ನೇ ಬಾರಿ ಮುಖಾಮುಖಿಯಾಗಲಿದ್ದಾರೆ. ಈ ಪೈಕಿ ಈ ವರೆಗಿನ ಇವರ ಹೆಡ್-ಟು- ಹೆಡ್ ದಾಖಲೆ 29-26.

ಜೊಕೊವಿಕ್ ಮತ್ತು ನಡಾಲ್ ಇಬ್ಬರಲ್ಲಿ ಯಾರು ಗೆದ್ದರೂ ಟೆನಿಸ್ ಜಗತ್ತಿನಲ್ಲಿ ದಾಖಲೆ ನಿರ್ಮಾಣವಾಗಲಿದೆ.

 ನಡಾಲ್ 99ನೇ ಜಯ ಗಳಿಸಿದ್ದಾರೆ. ಫ್ರೆಂಚ್ ಓಪನ್‌ನಲ್ಲಿ 101 ಪಂದ್ಯಗಳನ್ನು ಆಡಿರುವ ನಡಾಲ್ ಈ ವರೆಗೆ 2 ಪಂದ್ಯಗಳಲ್ಲಿ ಮಾತ್ರ ಸೋತಿದ್ದಾರೆ. 2015ರಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಜೊಕೊವಿಕ್‌ಗೆ ಶರಣಾಗಿದ್ದರು.

ರೋಜರ್ ಫೆಡರರ್ ಅವರ 20 ಗ್ರಾನ್‌ಸ್ಲಾಮ್ ಪ್ರಶಸ್ತಿಗಳ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಲು ನಡಾಲ್‌ಗೆ ಕೇವಲ ಒಂದು ಪ್ರಶಸ್ತಿಯನ್ನು ಜಯಿಸಬೇಕಾಗಿದೆ. ಮೇಜರ್ ಟೂರ್ನಮೆಂಟ್‌ನಲ್ಲಿ ನಡಾಲ್ ತಮ್ಮ 28ನೇ ಫೈನಲ್ ಪ್ರವೇಶಿಸಿದ್ದಾರೆ.

 2016ರ ಫ್ರೆಂಚ್ ಓಪನ್ ಚಾಂಪಿಯನ್ ಜೊಕೊವಿಕ್ 18ನೇ ಗ್ರಾನ್ ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಪ್ರಶಸ್ತಿ ಗೆದ್ದರೆ ಅರ್ಧ ಶತಮಾನದಲ್ಲಿ ನಾಲ್ಕು ಗ್ರಾನ್ ಸ್ಲಾಮ್‌ಗಳನ್ನು 2 ಬಾರಿ ಜಯಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News