ಹಸುವನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡ ಮೂವರು ಗೆಳತಿಯರು

Update: 2020-10-11 03:56 GMT

ಭೋಪಾಲ್, ಅ.11: ಹೆದ್ದಾರಿಯಲ್ಲಿ ಹಸುವಿಗೆ ತಮ್ಮ ಕಾರು ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಕಾರು ಉರುಳಿಬಿದ್ದ ಪರಿಣಾಮ ಅದರಲ್ಲಿದ್ದ ಮೂವರು ಮಹಿಳೆಯರು ಮೃತಪಟ್ಟ ಘಟನೆ ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಯರು ದಿಲ್ಲಿಯವರು. ಘಟನೆಯಲ್ಲಿ ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ನೇಹಿತೆಯರಾಗಿದ್ದ ಅವರು ದಿಲ್ಲಿಯಿಂದ ಓಂಕಾರೇಶ್ವರ ದೇವಸ್ಥಾನ ನೋಡುವ ಸಲುವಾಗಿ ಕಾರಿನಲ್ಲಿ ಹೊರಟಿದ್ದರೆನ್ನಲಾಗಿದೆ. ದಿಲ್ಲಿಗೆ ವಾಪಸ್ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಚಚೋಡಾ ಪೊಲೀಸ್ ಠಾಣೆಯ ಅಧಿಕಾರಿ ರಾಜೇಶ್ ಗುಪ್ತಾ ವಿವರಿಸಿದ್ದಾರೆ.

ಮೃತರನ್ನು ಸಂತೋಷ್ ಕುಮಾರಿ (48), ಗಾಯತ್ರಿ ಸಿಂಗ್ (42), ಪೂನಂ ಭಾರತಿ (40) ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಬಿಂದೂ ಶರ್ಮಾ (40) ತೀವ್ರ ಗಾಯಗಳೊಂದಿಗೆ ಗ್ವಾಲಿಯರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ದಿಢೀರನೇ ಹಸು ಕಾಣಿಸಿಕೊಂಡಿದ್ದು, ಅದಕ್ಕೆ ಕಾರು ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರಿನ ದಿಕ್ಕನ್ನು ದಿಢೀರನೇ ಬದಲಾಯಿಸಿ ಬ್ರೇಕ್ ಹಾಕಿದ್ದು ಅಪಘಾತಕ್ಕೆ ಕಾರಣ ಎಂದು ಬಿಂದೂ ಶರ್ಮಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕಾರು ನಿಯಂತ್ರಣ ಕಳೆದುಕೊಂಡು ಮಗುಚಿತು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News