ಇಂಜಿನಿಯರಿಂಗ್ ಕಾಲೇಜುಗಳು ಹೆಚ್ಚು ಶುಲ್ಕ ಪಡೆಯುವಂತಿಲ್ಲ: ಎಐಸಿಟಿಇ ಸೂಚನೆ

Update: 2020-10-11 18:28 GMT

ಬೆಂಗಳೂರು, ಅ. 11: ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳು ವಿದ್ಯಾರ್ಥಿಗಳಿಂದ ಹೆಚ್ಚುವರಿ ಮತ್ತು ಅನಾವಶ್ಯಕವಾಗಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು(ಎಐಸಿಟಿಇ) ಹೇಳಿದೆ.

ಕೊರೋನದಿಂದ ಜನರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಚಟುವಟಿಕೆ, ಕಾಲೇಜು ಅಭಿವೃದ್ಧಿ, ಸಾರಿಗೆ, ಗ್ರಂಥಾಲಯ ಎಂದೆಲ್ಲಾ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು. ಸೂಚನೆಯನ್ನು ಮೀರಿ ವಸೂಲಿ ಮಾಡಿದ್ದಲ್ಲಿ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇಂಜಿನಿಯರಿಂಗ್ ಪ್ರವೇಶ ಆರಂಭವಾಗುತ್ತಿದ್ದಂತೆಯೇ ಹೆಚ್ಚುವರಿ ಶುಲ್ಕದ ದೂರು ಕೇಳಿ ಬರುತ್ತದೆ. ದೂರು ಸ್ವೀಕಾರಕ್ಕಾಗಿಯೇ ಸರಕಾರವೇ ನೇಮಿಸಿರುವ ಪ್ರವೇಶ ಮೇಲ್ವಿಚಾರಣಾ ಸಮಿತಿ ದೂರಿನ ಹಿನ್ನೆಲೆಯಲ್ಲಿ ಸಾಕಷ್ಟು ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡುತ್ತದೆ. ಇನ್ನು ಸಿಇಟಿ ಪ್ರವೇಶ ಪ್ರಕ್ರಿಯೆ ಆರಂಭಿಸುವ ಮೊದಲೇ ಮ್ಯಾನೇಜ್‍ಮೆಂಟ್ ಸೀಟು ಮತ್ತು ಕಳೆದ ವರ್ಷದ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ಕಾಲೇಜುಗಳು ನಡೆದಿರುವುದೇ ಕಡಿಮೆ. ಇಂಥ ಸಮಯದಲ್ಲಿಯೂ ಕೆಲವು ಕಾಲೇಜುಗಳು ಹಾಸ್ಟೆಲ್ ಶುಲ್ಕ, ಸಾರಿಗೆ ಶುಲ್ಕ ಪಾವತಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿವೆ.

ಕೊರೋನದಿಂದ ವಿದ್ಯಾರ್ಥಿಗಳು ಊರಿಗೆ ಹೋಗಿದ್ದಾರೆ. ಈ ವೇಳೆ ಹಾಸ್ಟೆಲ್ ಅಥವಾ ಕಾಲೇಜಿನ ವಾಹನ ಬಳಕೆ ಮಾಡಿಲ್ಲ. ಆದರೂ, ಶುಲ್ಕ ಪಾವತಿಸುವಂತೆ ಹೇಳುವುದು ಸರಿಯಲ್ಲ ಎಂದು ಪೋಷಕರು ಎಐಸಿಟಿಇಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಗೆ ಸೂಚನೆ ರವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News