ಭಾರತದಲ್ಲಿ ಜೂನ್‌ನಿಂದ 18,006 ಟನ್ ಕೊರೋನ ತ್ಯಾಜ್ಯ ಉತ್ಪತ್ತಿ: ಮಹಾರಾಷ್ಟ್ರದಲ್ಲಿ ಅತ್ಯಧಿಕ

Update: 2020-10-12 16:08 GMT

ಹೊಸದಿಲ್ಲಿ, ಅ.12: ಭಾರತದಲ್ಲಿ ಕಳೆದ 4 ತಿಂಗಳಲ್ಲಿ 18,006 ಟನ್‌ನಷ್ಟು ಕೋವಿಡ್-19 ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿದ್ದು ಇದರಲ್ಲಿ ಮಹಾರಾಷ್ಟ್ರದ ಪಾಲು 3,587 ಟನ್‌ಗಳಾಗಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಯ ಅಂಕಿಅಂಶ ತಿಳಿಸಿದೆ. ಸೆಪ್ಟಂಬರ್ ತಿಂಗಳೊಂದರಲ್ಲೇ ಸುಮಾರು 5,500 ಟನ್ ಕೋವಿಡ್-19 ತ್ಯಾಜ್ಯ ಉತ್ಪತ್ತಿಯಾಗಿದೆ. ಕೊರೋನ ತ್ಯಾಜ್ಯಗಳ ಸಂಗ್ರಹ, ಸಂಸ್ಕರಣೆ ಮತ್ತು ವಿಲೇವಾರಿಯನ್ನು 198 ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಕೇಂದ್ರ(ಸಿಬಿಡಬ್ಲುಟಿಎಫ್‌ಎಸ್)ಗಳ ಮೂಲಕ ನಿರ್ವಹಿಸಲಾಗಿದೆ. ಜೂನ್‌ನಿಂದ ಸೆಪ್ಟಂಬರ್‌ವರೆಗಿನ 4 ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ 3,587 ಟನ್, ತಮಿಳುನಾಡು 1,737 ಟನ್, ಗುಜರಾತ್ 1,638 ಟನ್, ಕೇರಳ 1,516 ಟನ್, ಉತ್ತರಪ್ರದೇಶ 1,432 ಟನ್, ದಿಲ್ಲಿ 1,400 ಟನ್, ಕರ್ನಾಟಕ 1,380 ಟನ್ ಮತ್ತು ಪಶ್ಚಿಮ ಬಂಗಾಳದಲ್ಲಿ 1,000 ಟನ್ ಕೊರೋನ ತ್ಯಾಜ್ಯ ಉತ್ಪತ್ತಿಯಾಗಿದೆ. ಸೆಪ್ಟಂಬರ್‌ನಲ್ಲಿ ಸುಮಾರು 5,500 ಟನ್ ಕೊರೋನ ತ್ಯಾಜ್ಯ ಉತ್ಪತ್ತಿಯಾಗಿದ್ದು ಇದರಲ್ಲಿ ಗುಜರಾತ್‌ನ ಪಾಲು ಅಧಿಕವಾಗಿದೆ(622 ಟನ್). ಆ ಬಳಿಕದ ಸ್ಥಾನಗಳಲ್ಲಿ ತಮಿಳುನಾಡು(543 ಟನ್), ಮಹಾರಾಷ್ಟ್ರ(524 ಟನ್), ಉತ್ತರಪ್ರದೇಶ (507 ಟನ್) ಮತ್ತು ಕೇರಳ(494 ಟನ್) ರಾಜ್ಯವಿದೆ. ದಿಲ್ಲಿಯಲ್ಲಿ 382 ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ.

ಆರೋಗ್ಯ ಕೇಂದ್ರಗಳು, ಕ್ವಾರಂಟೈನ್ ಕೇಂದ್ರಗಳು, ಮನೆ, ಸ್ಯಾಂಪಲ್ ಸಂಗ್ರಹ ಕೇಂದ್ರಗಳು, ಪ್ರಯೋಗಾಲಯಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಾಮಾನ್ಯ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಕೇಂದ್ರ(ಸಿಬಿಡಬ್ಲುಟಿಎಫ್‌ಎಸ್)ಗಳಿಗೆ ಕೊರೋನ ತ್ಯಾಜ್ಯದ ನಿರ್ವಹಣೆ, ಸಂಸ್ಕರಣೆ ಹಾಗೂ ವಿಲೇವಾರಿ ಕುರಿತಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕಳೆದ ಮಾರ್ಚ್‌ನಲ್ಲಿ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಅಲ್ಲದೆ ‘ಕೋವಿಡ್19ಬಿಡಬ್ಲುಎಂ’ ಮೊಬೈಲ್ ಆ್ಯಪ್ ಅನ್ನೂ ಬಿಡುಗಡೆಗೊಳಿಸಿದೆ. ಈ ಆ್ಯಪ್ ಮೂಲಕ ಕೊರೋನ ಸೋಂಕಿನ ಉತ್ಪಾದನೆ, ಸಂಗ್ರಹ ಮತ್ತು ವಿಲೇವಾರಿ ಪ್ರಕ್ರಿಯೆಯನ್ನು ಗಮನಿಸಬಹುದಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಗಳು ಈ ಆ್ಯಪ್ ಬಳಸುವುದನ್ನು ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿದೆ.

ಕೊರೋನ ಬಯೋಮೆಡಿಕಲ್ ತ್ಯಾಜ್ಯ

ಪಿಪಿಇ ಕಿಟ್‌ಗಳು, ಮಾಸ್ಕ್‌ಗಳು, ಶೂ ಕವರ್, ಕೈಗವಸು, ಮಾನವ ಅಂಗಾಂಶಗಳು, ರಕ್ತ, ದೇಹದ ದ್ರವಗಳು ಅಂಟಿಕೊಂಡಿರುವ ಬ್ಯಾಂಡೇಜ್, ಪ್ಲಾಸ್ಟಿಕ್ ವಸ್ತುಗಳು, ಹತ್ತಿಯ ಬಟ್ಟೆ, ರಕ್ತ ಅಥವಾ ದೇಹದ ದ್ರವ ಅಂಟಿಕೊಂಡಿರುವ ಹಾಸಿಗೆಯ ಬಟ್ಟೆಗಳು, ರಕ್ತದ ಚೀಲಗಳು, ಇಂಜೆಕ್ಷನ್ ಸೂಜಿಗಳು, ಸಿರಿಂಜ್‌ಗಳು ಕೊರೋನ ಬಯೋಮೆಡಿಕಲ್ ತ್ಯಾಜ್ಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News