ನೀರಿನ ದರ ಹೆಚ್ಚಳ ಮಾಡುವ ಜಲಮಂಡಳಿ ನಿರ್ಧಾರಕ್ಕೆ ಬ್ರೇಕ್

Update: 2020-10-12 16:47 GMT

ಬೆಂಗಳೂರು, ಅ.12: ಕಾವೇರಿ ನೀರಿನ ದರ ಹೆಚ್ಚಳ ಮಾಡುವ ಬೆಂಗಳೂರು ಜಲಮಂಡಳಿ ನಿರ್ಧಾರಕ್ಕೆ ರಾಜ್ಯ ಸರಕಾರದ ಅನುಮತಿ ಸಿಕ್ಕಿಲ್ಲ. ಫೆಬ್ರವರಿಯಲ್ಲೇ ಜಲಮಂಡಳಿ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದೆ.

ಹೀಗಾಗಿ, ಈ ವರ್ಷ ನೀರಿನ ದರ ಏರಿಕೆ ಅನುಮಾನವಾಗಿದ್ದು, 2021 ಏಪ್ರಿಲ್‍ವರೆಗೂ ರಾಜಧಾನಿಯ ನಾಗರಿಕರು ನೀರಿನ ಬೆಲೆ ಏರಿಕೆ ಬಿಸಿಯಿಂದ ತಪ್ಪಿಸಿಕೊಂಡಂತಾಗಿದೆ. ಈ ಹಿಂದೆ 2014ರಲ್ಲಿ ಕಾವೇರಿ ನೀರಿನ ದರ ಹೆಚ್ಚಳವಾಗಿತ್ತು. ಪ್ರತಿ ವರ್ಷ ಬೆಸ್ಕಾಂ ಶುಲ್ಕ, ಸಿಬ್ಬಂದಿ ಸಂಬಳ, ಯೋಜನೆಗಳ ನಿರ್ವಹಣೆ ವೆಚ್ಚ ಹೆಚ್ಚಳವಾಗಿದೆ ಎಂದು 2019ರಲ್ಲಿ ಶೇ. 15-20 ರಷ್ಟು ದರ ಪರಿಷ್ಕರಣೆಗೆ ಮುಂದಾಗಿತ್ತು. ಆದರೆ, ಸಾರ್ವಜನಿಕರಿಗೆ ಹೊರೆಯಾಗುತ್ತದೆ ಎಂದು ಜಲಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ಇದಕ್ಕೆ ಅನುಮತಿ ದೊರೆಯಲಿಲ್ಲ.

ಹೀಗಾಗಿ, ಅರ್ಥಿಕ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದಲ್ಲಿ ಮಾತ್ರ ಹೆಚ್ಚಳ ಮಾಡುವಂತೆ ಅಭಿಪ್ರಾಯ ಕೇಳಿಬಂದಿತ್ತು. ಹೀಗಾಗಿ, ಮತ್ತೆ ಮೂರು ಮಾದರಿಯಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಎಂಟು ತಿಂಗಳಾದರೂ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಒಂದು ವೇಳೆ ಚರ್ಚೆಗೆ ಬಂದರೂ ಕೋವಿಡ್ ಸಂಕಷ್ಟದಿಂದಾಗಿ ಪ್ರಸಕ್ತ ವರ್ಷ ದರ ಪರಿಷ್ಕರಣೆಗೆ ಅನುಮತಿ ಸಿಗುವುದು ಅನುಮಾನ ಎಂದು ಎಂದು ನಗರಾಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

ಜಲಮಂಡಳಿಗೆ ಗೃಹ ಬಳಕೆದಾರರಿ ಗಿಂತಲೂ ವಾಣಿಜ್ಯ ಬಳಕೆದಾರರಿಂದ ಹೆಚ್ಚಿನ ಆದಾಯ ಬರುತ್ತದೆ. ಸದ್ಯ ಸೋಂಕಿನಿಂದ ನಗರ ಸುತ್ತಮುತ್ತಲ ಕಾರ್ಖಾನೆಗಳು, ಐಶಾರಾಮಿ ಹೋಟೆಲ್‍ಗಳು, ಕ್ಲಬ್‍ಗಳು ಖಾಸಗಿ ಕಂಪನಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ವೇಳೆ ನೀರಿನ ದರ ಹೆಚ್ಚು ಮಾಡಿದರೆ ಅವರಿಗೆ ಇನ್ನಷ್ಟು ಹೊರೆಯಾಗಲಿದೆ. ಹೀಗಾಗಿ, ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರ ದರ ಪರಿಷ್ಕರಣೆಗೆ ಸರಕಾರ ಒಪ್ಪಿಗೆ ನೀಡಬಹುದು ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News