ಕಳೆದ 20 ವರ್ಷಗಳಲ್ಲಿ ಪ್ರಾಕೃತಿಕ ವಿಪತ್ತು ದುಪ್ಪಟ್ಟು; ಹವಾಮಾನ ಬದಲಾವಣೆಯೇ ಪ್ರಮುಖ ಕಾರಣ: ವಿಶ್ವಸಂಸ್ಥೆ

Update: 2020-10-12 18:32 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 12: ಕಳೆದ 20 ವರ್ಷಗಳಲ್ಲಿ ಪ್ರಾಕೃತಿಕ ವಿಪತ್ತುಗಳು ದುಪ್ಪಟ್ಟಾಗಿರುವುದಕ್ಕೆ ಹವಾಮಾನ ಬದಲಾವಣೆ ಪ್ರಮುಖ ಕಾರಣವಾಗಿದೆ ಎಂದು ವಿಶ್ವಸಂಸ್ಥೆ ಸೋಮವಾರ ಹೇಳಿದೆ.

2000 ಮತ್ತು 2019ರ ನಡುವಿನ ಅವಧಿಯಲ್ಲಿ 7,348 ಪ್ರಾಕೃತಿಕ ವಿಪತ್ತುಗಳು ಸಂಭವಿಸಿವೆ ಎಂದು ವಿಶ್ವಸಂಸ್ಥೆಯ ವಿಪತ್ತು ಅಪಾಯ ನಿರ್ವಹಣಾ ಕಚೇರಿ ತಿಳಿಸಿದೆ. ಈ ಪ್ರಾಕೃತಿಕ ದುರಂತಗಳಿಗೆ 12.3 ಲಕ್ಷ ಮಂದಿ ಬಲಿಯಾಗಿದ್ದಾರೆ ಹಾಗೂ 420 ಕೋಟಿ ಜನರ ಮೇಲೆ ಅವು ಪ್ರಭಾವ ಬೀರಿವೆ ಎಂದು ಅದು ಹೇಳಿದೆ.

ಈ ಪ್ರಾಕೃತಿಕ ದುರಂತಗಳಿಂದಾಗಿ ಜಾಗತಿಕ ಆರ್ಥಿಕತೆಗೆ ಸುಮಾರು 2.97 ಟ್ರಿಲಿಯ ಡಾಲರ್ (ಸುಮಾರು 218 ಲಕ್ಷ ಕೋಟಿ ರೂಪಾಯಿ) ನಷ್ಟವಾಗಿದೆ.

ಅದಕ್ಕೂ ಮೊದಲು, ಅಂದರೆ 1980 ಮತ್ತು 1999ರ ನಡುವಿನ ಅವಧಿಯಲ್ಲಿ 4,212 ಪ್ರಮುಖ ಪ್ರಾಕೃತಿಕ ವಿಪತ್ತುಗಳು ಸಂಭವಿಸಿವೆ ಎಂದು ವಿಶ್ವಸಂಸ್ಥೆಯು ‘ದ ಹ್ಯೂಮನ್ ಕಾಸ್ಟ್ ಆಫ್ ಡಿಸ್ಯಾಸ್ಟರ್ಸ್ 2000-2019’ ಎಂಬ ತನ್ನ ನೂತನ ವರದಿಯಲ್ಲಿ ಹೇಳಿದೆ.

ನಂತರದ 20 ವರ್ಷಗಳಲ್ಲಿ ಪ್ರವಾಹ, ಬರ ಮತ್ತು ಚಂಡಮಾರುತ ಮುಂತಾದ ಪ್ರಾಕೃತಿಕ ವಿಪತ್ತುಗಳ ಸಂಖ್ಯೆಯಲ್ಲಿ ಅಗಾಧ ಹೆಚ್ಚಳವಾಗಲು ಜಾಗತಿಕ ತಾಪಮಾನವೇ ಕಾರಣ ಎಂದು ವಿಶ್ವಸಂಸ್ಥೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News