ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋರಿ ರಾಗಿಣಿ ಅರ್ಜಿ ಸಲ್ಲಿಕೆ: ವಿಚಾರಣೆ ಮುಂದೂಡಿದ ಕೋರ್ಟ್

Update: 2020-10-13 14:07 GMT

ಬೆಂಗಳೂರು, ಅ.13: ಡ್ರಗ್ಸ್ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಅವರು ಬೆನ್ನು ನೋವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಎನ್‍ಡಿಪಿಎಸ್ ವಿಶೇಷ ಕೋರ್ಟ್ ಅ.16ಕ್ಕೆ ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದೆ.

ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿತು. ರಾಗಿಣಿ ದ್ವಿವೇದಿ ಬೆನ್ನು ನೋವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕೋರಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಸಿಸಿಬಿ ಪರ ವಕೀಲರು, ರಾಗಿಣಿ ಅವರ ಮನವಿಯನ್ನು ಪುರಸ್ಕರಿಸಬಾರದು. ರಾಗಿಣಿ ಈಗಾಗಲೇ ಸಾಕ್ಷಿ ನಾಶಕ್ಕೆ ಪ್ರಯತ್ನಪಟ್ಟಿದ್ದಾರೆ. ಮೊಬೈಲ್ ಡಾಟಾ ಡಿಲೀಟ್ ಮಾಡಲು ಯತ್ನಿಸಿದ್ದಾರೆ ಎಂದು ಆಕ್ಷೇಪಣೆಯಲ್ಲಿ ತಿಳಿಸಿದ್ದಾರೆ.

ಜೈಲಿಗೆ ಹೋಗುವಾಗ ಯಾವುದೇ ಬೆನ್ನು ನೋವಿನ ಸಮಸ್ಯೆ ಬಗ್ಗೆ ಹೇಳಿಕೊಂಡಿಲ್ಲ. ಈಗ ಜೈಲ್‍ನಿಂದ ಹೊರ ಬರಲು, ಈ ಅರ್ಜಿ ಸಲ್ಲಿಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆಸ್ಪತ್ರೆ ಉತ್ತಮವಾಗಿದೆ. ಅವರು ಅಲ್ಲೇ ಚಿಕಿತ್ಸೆ ಪಡೆದುಕೊಳ್ಳಬಹುದು. ಹೀಗಾಗಿ, ರಾಗಿಣಿ ಅವರ ಮನವಿಯನ್ನು ತಿರಸ್ಕರಿಸಿ ಎಂದು ಪೀಠಕ್ಕೆ ಮನವಿ ಮಾಡಿದ್ದಾರೆ.

ತಾಯಿ, ತಮ್ಮನ ಐಪಾಡ್, ಪೆನ್ ಡ್ರೈವ್ ವಾಪಸ್ ನೀಡುವಂತೆ ಮತ್ತೊಂದು ಅರ್ಜಿಯಲ್ಲಿ ರಾಗಿಣಿ ದ್ವಿವೇದಿ ಪರ ವಕೀಲರು ಮನವಿ ಮಾಡಿದ್ದಾರೆ. ಸಿಸಿಬಿ ಪೊಲೀಸರು ರಾಗಿಣಿ ನಿವಾಸದ ಮೇಲೆ ದಾಳಿ ಮಾಡಿದಾಗ ಐಪಾಡ್, ಪೆನ್ ಡ್ರೈವ್ ವಶಕ್ಕೆ ಪಡೆದುಕೊಂಡಿದ್ದರು.

ಸೆ.28ರಂದು ರಾಗಿಣಿ ಜಾಮೀನು ಅರ್ಜಿಯನ್ನು ಎನ್‍ಡಿಪಿಎಸ್ ವಿಶೇಷ ಕೋರ್ಟ್ ವಜಾಗೊಳಿಸಿತ್ತು. ಈಗ ಜಾಮೀನು ಪಡೆಯಲು ರಾಗಿಣಿ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಬೇಕಿದೆ.

ಎನ್‍ಡಿಪಿಎಸ್ ಕೋರ್ಟ್‍ನಲ್ಲಿ ರಾಗಿಣಿ ಪರ ವಕೀಲರು ಸೆ.14ರಂದು ರಾಗಿಣಿಯನ್ನು ಆಸ್ಪತ್ರೆಗೆ ದಾಖಲು ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಆಗ ಕೋರ್ಟ್ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News