ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಿದ ತೃಪ್ತಿ: ಡಿಸಿಎಂ ಗೋವಿಂದ ಕಾರಜೋಳ

Update: 2020-10-13 14:24 GMT

ಬೆಂಗಳೂರು, ಅ. 13: `ಸಮಾಜ ಕಲ್ಯಾಣ ಇಲಾಖೆಯಲ್ಲಿ ಒಂದು ವರ್ಷದಿಂದ ಹಲವು ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು, ಒಂದು ವರ್ಷದಲ್ಲಿ ಅತ್ಯಂತ ಒಳ್ಳೆಯ ಕೆಲಸ ಮಾಡಿದ ತೃಪ್ತಿ ಇದೆ' ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಇಲಾಖೆ ಒಂದು ವರ್ಷದ ಪ್ರಗತಿ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, `ಸಮಾಜ ಕಲ್ಯಾಣ ಖಾತೆಯನ್ನು ತಮ್ಮಿಂದ ಹಿಂಪಡೆದು ಶ್ರೀರಾಮುಲು ಅವರಿಗೆ ನೀಡಿರುವುದಕ್ಕೆ ತಮಗೆ ಯಾವುದೇ ಅಸಮಾಧಾನ ಇಲ್ಲ. ಹೆಚ್ಚುವರಿ ಖಾತೆಯನ್ನು ಬಿಟ್ಟು ಕೊಟ್ಟಿದ್ದೇನೆ ಅಷ್ಟೆ. ಒಂದು ವರ್ಷದಲ್ಲಿ ಇಲಾಖೆಯ ಜವಾಬ್ದಾರಿ ಹೊತ್ತು ಸಾಮಾಜಿಕ ನ್ಯಾಯ, ಅತ್ಯಂತ ಕಳಕಳಿಯಿಂದ ಶೋಷಿತರಿಗೆ, ಬಡವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದೇನೆ' ಎಂದು ಹೇಳಿದರು.

ಕಲ್ಯಾಣ ಕಾರ್ಯಕ್ಕೆ ವೆಚ್ಚ: 2019-20ನೆ ಸಾಲಿನಲ್ಲಿ 27,558 ಕೋಟಿ ರೂ.ಹಣ ಎಸ್ಟಿಪಿ ಮತ್ತು ಟಿಎಸ್ಟಿ ಯೋಜನೆಯಡಿ ಹಂಚಿಕೆಯಾಗಿತ್ತು. ಆ ಪೈಕಿ 25,387 ಕೋಟಿ ರೂ.ಹಣವನ್ನು ವೆಚ್ಚ ಮಾಡಲಾಗಿದೆ. ಈ ಹಣದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಕಲ್ಯಾಣಕ್ಕೆ 18,228 ಕೋಟಿ ರೂ., ಪರಿಶಿಷ್ಟ ಪಂಗಡ(ಎಸ್ಟಿ)ದ ಜನರಿಗೆ 7,159 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ಅವರು ವಿವರಣೆ ನೀಡಿದರು.

ಇದೇ ಯೋಜನೆಯಡಿ 2020-21ನೆ ಸಾಲಿನಲ್ಲಿ 27,690 ಕೋಟಿ ರೂ.ಹಣ ಹಂಚಿಕೆಯಾಗಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 5,603 ಕೋಟಿ ರೂ.ಹಣ ವೆಚ್ಚ ಮಾಡಲಾಗಿದೆ. ಕೊರೋನ ವೈರಸ್ ಸೋಂಕಿನ ಕಾರಣದಿಂದ ಈ ವರ್ಷ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದ ಅವರು, ವಿದ್ಯಾರ್ಥಿ ನಿಲಯಗಳ ಕಟ್ಟಡಕ್ಕೆ 188 ಕೋಟಿ ರೂ.ಅನುದಾನ ನೀಡಲಾಗಿದೆ. ಇದರಲ್ಲಿ 128 ಕೋಟಿ ರೂ.ವೆಚ್ಚ ಮಾಡಿದ್ದೇವೆ. 129 ಕಟ್ಟಡ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಕಾರಜೋಳ ಹೇಳಿದರು.

ಶಿಕ್ಷಕರ ನೇಮಕ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ 660 ಶಿಕ್ಷಕರ ನೇಮಕ ಮಾಡಲಾಗಿದೆ. ಹಾಗೆಯೇ 993 ಬೋಧಕೇತರ ಸಿಬ್ಬಂದಿಗಳ ನೇಮಕಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ)ದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದ್ದು, ಇದುವರೆಗೂ 3,200 ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿಗೆ ಅನುದಾನ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

`ಪ್ರಬುದ್ಧ' ಯೋಜನೆಯಡಿ 88 ವಿದ್ಯಾರ್ಥಿಗಳಿಗೆ ಹೊರ ದೇಶದಲ್ಲಿ ಓದಲು ಅವಕಾಶ ಮಾಡಿಕೊಟ್ಟು ಇದಕ್ಕಾಗಿ 22 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಂತರ್ಜಾತಿ ವಿವಾಹ ಪ್ರೋತ್ಸಾಹಕ್ಕೆ 89 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದ ಅವರು, ಕಾಲನಿಗಳ ಅಭಿವೃದ್ಧಿಗೆ 202 ಕೋಟಿ ರೂ., ಅರಣ್ಯ ಭಾಗದ ಜನರ ಪೌಷ್ಠಿಕ ಆಹಾರಕ್ಕಾಗಿ 43 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ 8,270 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇದಕ್ಕಾಗಿ 216 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅಂಕಿ-ಅಂಶಗಳನ್ನು ನೀಡಿದರು.

ಭೂ ಒಡೆತನ ಯೋಜನೆಯಡಿ 3,228 ಎಕರೆ ಜಮೀನು ಖರೀದಿಸಲಾಗಿದೆ. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದಡಿ ಅಗತ್ಯ ಕಲ್ಯಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಾಗೆಯೇ ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮದಡಿ 69 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು ಶೋಷಿತ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಇಲಾಖೆ ಕ್ರಮ ವಹಿಸಿದೆ ಎಂದು ಕಾರಜೋಳ ತಾನು ಸಚಿವನಾಗಿದ್ದ ವೇಳೆ ಇಲಾಖೆ ಸಾಧನೆಯ ವಿವರವನ್ನು ನೀಡಿದರು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ನಾಗಾಬಿಂಕಾದೇವಿ, ಆಯುಕ್ತ ರವಿಕುಮಾರ್ ಸುರಪುರ, ಸಲಹೆಗಾರ ಇ.ವೆಂಕಟಯ್ಯ, ಹಿರಿಯ ಅಧಿಕಾರಿಗಳಾದ ಸಂಗಪ್ಪ, ರಾಘವೇಂದ್ರ, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News