ಯಾರಿಗೆ ಯಾವ ಖಾತೆ ನೀಡಬೇಕೆಂಬುದು ಸಿಎಂ ಪರಮಾಧಿಕಾರ: ಸಿ.ಟಿ.ರವಿ

Update: 2020-10-13 14:35 GMT

ಬೆಂಗಳೂರು, ಅ.13: ಯಾರಿಗೆ ಯಾವ ಖಾತೆ ಕೊಡಬೇಕು ಅನ್ನೋದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರಮಾಧಿಕಾರ. ಅವರು ಸೂಕ್ತ ನಿರ್ಣಯವನ್ನೇ ತೆಗೆದುಕೊಂಡಿರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಶ್ರೀರಾಮುಲು ನಮ್ಮ ಪಕ್ಷದ ಪ್ರಮುಖ ನಾಯಕರು. ಅವರು ಆರೋಗ್ಯ ಇಲಾಖೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸಲು ದೊಡ್ಡ ಖಾತೆ ಸಮಾಜ ಕಲ್ಯಾಣ ಇಲಾಖೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಖಾತೆ ಬದಲಾವಣೆ ಶ್ರೀರಾಮುಲುಗೆ ಗೊತ್ತಿರಲಿಲ್ಲ ಅನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಸಿಎಂ ಅವರಿಗೆ ಆಪ್ತರು. ಆಪ್ತತೆಯ ಕಾರಣಕ್ಕೆ ಒಮ್ಮೊಮ್ಮೆ ಸಿಎಂ ವ್ಯಕ್ತಿಗತ ನಿರ್ಣಯ ಕೈಗೊಂಡಿರುತ್ತಾರೆ. ಖಾತೆ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಸಿಎಂ ಪರಮಾಧಿಕಾರ ಎಂದರು.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಗೆ ಇಬ್ಬರಿಂದ ಬಂಡಾಯದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಜೊತೆ ಸಹಕರಿಸಿ ಅಂತ ಅವರಿಗೆ ಹೇಳುತ್ತೇನೆ. ತಾಳಿದವನು ಬಾಳಿಯಾನು ಅನ್ನೋ ಗಾದೆ ಮಾತಿದೆ. ನೀವು ಸ್ಪರ್ಧಿಸಿದ್ರೂ, ಇಲ್ಲದಿದ್ರೂ ಗೆಲ್ಲೋದೇ ಬಿಜೆಪಿ. ನಿಮ್ಮ ಭವಿಷ್ಯದ ದೃಷ್ಟಿಯಿಂದ ನೀವು ನಿವೃತ್ತಿ ಘೋಷಿಸಿ. ಬಂಡಾಯ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರ ಅಧ್ಯಕ್ಷರಿಗೆ ಬಿಟ್ಟದ್ದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News