ಕೇಂದ್ರ ಸರಕಾರ ಕಾರ್ಪೊರೇಟ್ ಮನೆತನಗಳ ಪರವಾಗಿದೆ: ಎಐಡಿಎಸ್‍ಒ ಆರೋಪ

Update: 2020-10-13 16:25 GMT

ಬೆಂಗಳೂರು, ಅ.13: ಕೇಂದ್ರ ಸರಕಾರ ರೈತ, ಕಾರ್ಮಿಕ ಹಾಗೂ ಜನಸಾಮಾನ್ಯರಿಗೆ ಮಾರಕವಾಗುವಂತಹ ರೀತಿಯಲ್ಲಿ ಎಪಿಎಂಸಿ, ಅಗತ್ಯ ವಸ್ತುಗಳ ಕಾಯ್ದೆ, ವಿದ್ಯುತ್ ಕಾಯ್ದೆ, ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕಾರ್ಪೊರೇಟ್ ಪರವಾದ ನೀತಿಯನ್ನು ಅನುಸರಿಸುತ್ತಿದೆ ಎಂದು ಎಐಡಿಎಸ್‍ಒ(ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್) ಆರೋಪಿಸಿದೆ.

ಮಂಗಳವಾರ ಕೇಂದ್ರ ಸರಕಾರ ಜನವಿರೋಧಿ ನೀತಿ ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಎಐಡಿಎಸ್‍ಒ ರಾಜ್ಯಾದ್ಯಂತ ಕರೆ ನೀಡಿದ್ದ ಪ್ರತಿಭಟನೆಗೆ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿ, ಯಾವುದೇ ಕಾರಣಕ್ಕೂ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಬಾರದೆಂದು ಆಗ್ರಹಿಸಿದರು. ಕೋವಿಡ್ ಸಂಕಷ್ಟದಿಂದ ನಲುಗಿರುವ ದೇಶದ ಜನತೆಗೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರ ಎಪಿಎಂಸಿ, ವಿದ್ಯುತ್ ಕಾಯ್ದೆ, ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ದೇಶದಲ್ಲಿ ಬಡತನ, ನಿರುದ್ಯೋಗ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಸರಕಾರ, ಬಂಡವಾಳಶಾಹಿಗಳ ಪರವಾಗಿ ನೀತಿಗಳನ್ನು ಜಾರಿ ಮಾಡುವಲ್ಲಿ ನಿರತವಾಗಿದೆ ಎಂದು ಎಐಡಿಎಸ್‍ಒ ಆರೋಪಿಸಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದ ಭಗತ್‍ ಸಿಂಗ್, ಸುಭಾಷ್‍ಚಂದ್ರ ಬೋಸ್, ರಾಜಾರಾಮ್ ಮೋಹನ್‍ ರಾಯ್, ಈಶ್ವರ್ ಚಂದ್ರ ವಿದ್ಯಾಸಾಗರ ಸೇರಿದಂತೆ ಸಮಾಜ ಸುಧಾರಕರ ಚಿಂತನೆಗಳ ಸ್ಫೂರ್ತಿಯೊಂದಿಗೆ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಯುವ ಜನತೆ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಿದೆ ಎಂದು ಎಐಡಿಎಸ್‍ಒ ಪ್ರಕಟನೆಯ ಮೂಲಕ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News