ಕಸ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಹಸಿಕಸ ಯೋಜನೆ ಅನುಷ್ಠಾನ: ಬಿಬಿಎಂಪಿ ಚಿಂತನೆ

Update: 2020-10-13 17:29 GMT

ಬೆಂಗಳೂರು, ಅ.13: ನಗರದಲ್ಲಿ ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಒಂದು ನಿರ್ದಿಷ್ಟ ಚೌಕಟ್ಟು ರೂಪುಗೊಳ್ಳುತ್ತಿದ್ದು, ಪಾಲಿಕೆ ಇದೀಗ ಯಲಹಂಕ ಸೇರಿದಂತೆ 74 ವಾರ್ಡ್ ಗಳಲ್ಲಿ ಹಸಿ ಕಸ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

ನಗರದಲ್ಲಿ ಈಗಾಗಲೇ 38 ವಾರ್ಡ್ ನಲ್ಲಿ ಪ್ರತ್ಯೇಕ ಹಸಿ ಕಸ ಯೋಜನೆ ಜಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 26 ವಾರ್ಡ್‍ಗಳಲ್ಲಿ ಈ ಯೋಜನೆ ಜಾರಿಯಾಗಿದೆ. ನಗರದಲ್ಲಿ ಮೂಲ ಹಂತದಲ್ಲೇ ಕಸ ವಿಂಗಡಣೆ ಆಗದೆ ಇರುವುದು ಹಾಗೂ ಒಟ್ಟಿಗೆ ಸಂಗ್ರಹಿಸಿ ಭೂ ಭರ್ತಿಗೆ ಹಾಕುವುದು ಸೇರಿದಂತೆ ಎಲ್ಲಾ ಸಮಸ್ಯೆ ತಪ್ಪಿಸಲು ಹಸಿಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡುವ ಯೋಜನೆಗೆ ಸೆಪ್ಟೆಂಬರ್ ನಲ್ಲಿ ಪಾಲಿಕೆ ಚಾಲನೆ ನೀಡಿತ್ತು.

ಇದರ ಬೆನ್ನಲ್ಲೇ ಬಾಕಿ ವಾರ್ಡ್‍ಗಳಲ್ಲೂ ಪ್ರತ್ಯೇಕ ಕಸ ಸಂಗ್ರಹ ಯೋಜನೆ ಪ್ರಾರಂಭವಾಗುತ್ತಿದ್ದು, ಹೊಸದಾಗಿ 10 ವಾರ್ಡ್‍ಗಳಲ್ಲಿ ಟೆಂಡರ್ ದಾರರಿಗೆ ಕಾರ್ಯಾದೇಶ ಪತ್ರ ನೀಡಲಾಗಿದೆ. ಇನ್ನು ಟೆಂಡರ್ ನಲ್ಲಿ ಕಡಿಮೆ ಬಿಡ್ ಮಾಡಿ ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಪಾಲಿಕೆ ತೀರ್ಮಾನಿಸಿದೆ.

ಒಂದು ವರ್ಷ ಕಪ್ಪು ಪಟ್ಟಿಗೆ: ನಗರದಲ್ಲಿ ಪ್ರತ್ಯೇಕ ಕಸ ಸಂಗ್ರಹ ಮಾಡುವ ಯೋಜನೆಯ ಟೆಂಡರ್ ನಲ್ಲಿ ಭಾಗವಹಿಸಿ ಅದರ ಅನುಷ್ಠಾನದಲ್ಲಿ ಲೋಪವೆಸಗುವ ಹಾಗೂ ಹಿಂದೇಟು ಹಾಕುವ ಗುತ್ತಿಗೆದಾರರು 1 ವರ್ಷ ಕಪ್ಪುಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿದೆ.

ಮರು ಟೆಂಡರ್ ಮಾಡಲು ನಿರ್ಧಾರ: ದೇವರ ಜೀವನಹಳ್ಳಿ, ಸಗಾಯಪುರ ಸೇರಿ 9 ವಾರ್ಡ್‍ಗಳಲ್ಲಿ ಟೆಂಡರ್ ದಾರರು ಹಿಂದೇಟು ಹಾಗೂ ಹಾಲಿ ಟೆಂಡರ್ ನಲ್ಲಿ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಗೆ 9 ವಾರ್ಡ್‍ಗಳಲ್ಲಿ ಮರುಟೆಂಡರ್ ಕರೆಯಲು ಪಾಲಿಕೆ ನಿರ್ಧರಿಸಿದೆ.

ಕೆಂಪೇಗೌಡ ವಾರ್ಡ್, ಚೌಡೇಶ್ವರಿ ವಾರ್ಡ್, ಅಟ್ಟೂರು, ವಿದ್ಯಾರಣ್ಯಪುರ, ವಿಜಿನಾಪುರ, ಬಸವನಪುರ, ಹೂಡಿ, ಗರುಡಾಚಾರಪಾಳ್ಯ, ಗೋವಿಂದರಾಜ ನಗರ, ಮೂಡಲಪಾಳ್ಯ, ನಾಗರಬಾವಿ, ನಾಯಂಡ ಹಳ್ಳಿ, ರಾಯಪುರ, ಛಲವಾದಿ ಪಾಳ್ಯ, ಅಜಾದ್‍ನಗರ, ಲಕ್ಕಸಂದ್ರ, ಆಡುಗೋಡಿ, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ವಾರ್ಡ್, ದೀಪಾಂಜಲಿ ನಗರ, ಹೊಸಕೆರೆ ಹಳ್ಳಿ, ಗಣೇಶ ಮಂದಿರ, ಯಡಿಯೂರು, ಬೈರಸಂದ್ರ, ಬೊಮ್ಮನಹಳ್ಳಿ, ಮಂಗಮ್ಮನ ಪಾಳ್ಯ ಹಾಗೂ ಸಿಂಗಸಂದ್ರದಲ್ಲಿ ಜಾರಿಯಾಗಿದೆ.

ಒಣ ಕಸ ಸಂಗ್ರಹ ಘಟಕ ಅಭಿವೃದ್ಧಿ: ನಗರದಲ್ಲಿ 165 ಒಣಕಸ ಸಂಗ್ರಹ ಘಟಕಗಳಿವೆ. ಇದರಲ್ಲಿ 141 ಕೇಂದ್ರಗಳಲ್ಲಿ ಸಕ್ರಿಯವಾಗಿ ಒಣಕಸ ಸಂಗ್ರಹ ಮಾಡಲಾಗುತ್ತಿದೆ. ಪ್ರತ್ಯೇಕ ಕಸ ಸಂಗ್ರಹ ಯೋಜನೆ ಜಾರಿಯಾದ ಮೇಲೆ ಒಣಕಸ ಸಂಗ್ರಹ ಘಟಕಗಳ ಅಭಿವೃದ್ಧಿಗೂ ಪಾಲಿಕೆ ಮುಂದಾಗಿದೆ. ಈಗಾಗಲೇ 38 ವಾರ್ಡ್‍ಗಳಲ್ಲಿಯೂ ಒಣಕಸ ಘಟಕ ಹಾಗೂ ಸ್ತ್ರೀಶಕ್ತಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವ ಪಡೆದುಕೊಳ್ಳಲಾಗುತ್ತಿದೆ. ಇದಲ್ಲದೆ ಪಾಲಿಕೆಯ 8 ವಲಯಗಳ ವಿವಿಧ ಭಾಗದ 29 ಒಣಕಸ ಸಂಗ್ರಹ ಘಟಕಗಳ ನವೀಕರಣ ಕಾರ್ಯಕ್ಕೂ ಪಾಲಿಕೆ ಚಾಲನೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News