ಮುಂದಿನ ವರ್ಷ 10 ಲಕ್ಷಕ್ಕೂ ಅಧಿಕ ಮಂದಿಗೆ ಬೌದ್ಧದಮ್ಮ ದೀಕ್ಷೆ: ಡಾ.ಎಂ.ವೆಂಕಟಸ್ವಾಮಿ

Update: 2020-10-14 15:56 GMT

ಬೆಂಗಳೂರು, ಅ. 14: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಈ ವರ್ಷವೇ ಏರ್ಪಡಿಸಲು ಉದ್ದೇಶಿಸಿದ್ದ ಬೌದ್ಧಧರ್ಮ ದೀಕ್ಷಾ ಸಮಾರಂಭವನ್ನು ಮುಂದಿನ ವರ್ಷ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದ್ದು, 10 ಲಕ್ಷಕ್ಕೂ ಅಧಿಕ ಮಂದಿ ಬೌದ್ಧಧರ್ಮ ದೀಕ್ಷೆ ಕೈಗೊಳ್ಳಲಿದ್ದಾರೆ ಎಂದು ವಿಶ್ವ ಬುದ್ಧದಮ್ಮ ಸಂಘ ಮತ್ತು ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಹಾಗೂ ಕರ್ನಾಟಕ ಬೌದ್ಧ ಸಂಘದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಸದಾಶಿವನಗರದಲ್ಲಿನ ನಾಗಸೇನಾ ಬುದ್ದ ವಿಹಾರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 64ನೆ ಬೌದ್ಧದಮ್ಮ ದೀಕ್ಷಾ ಸಮಾರಂಭದ ನೆನಪಿನಲ್ಲಿ ಏರ್ಪಡಿಸಿದ್ದ ಸಮಾರಂಭಕ್ಕೆ 300ಕ್ಕೂ ಅಧಿಕ ಮಂದಿ ದಮ್ಮ ದೀಕ್ಷೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಜಾತಿ ತಾರತಮ್ಯ, ಅಸ್ಪೃಶ್ಯತೆ, ಅಸಮಾನತೆ ಮೇಲೆ ನಿಂತಿರುವ ಧರ್ಮಗಳನ್ನು ಧಿಕ್ಕರಿಸಿ ದಲಿತ, ಶೋಷಿತರು ಸಮಾನತೆ ಪ್ರತಿಪಾದಿಸುವ ಬೌದ್ಧಧರ್ಮ ದೀಕ್ಷೆಯನ್ನು ಸ್ವೀಕಾರ ಮಾಡಬೇಕು ಎಂದು ಕರೆ ನೀಡಿದರು.

ಮುಂದಿನ ವರ್ಷ 10ಲಕ್ಷ ಮಂದಿ ಬೌದ್ಧಧರ್ಮ ಸ್ವೀಕಾರ ಸಮಾರಂಭಕ್ಕೆ ಮೊದಲು ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿಯೂ ಪ್ರತಿ ಜಿಲ್ಲೆಗೂ 10 ಸಾವಿರ ಮಂದಿಯಂತೆ ದಮ್ಮ ದೀಕ್ಷೆ ಸ್ವೀಕರಿಸಲಿದ್ದು, ಆ ಬಳಿಕ 2021ರ ಅಕ್ಟೋಬರ್ 14ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 10 ಲಕ್ಷ ಮಂದಿ ಬೌದ್ಧಧರ್ಮ ದೀಕ್ಷೆ ಸ್ವೀಕರಿಸಲಿದ್ದಾರೆ ಎಂದು ವೆಂಕಟಸ್ವಾಮಿ ಇದೇ ವೇಳೆ ತಿಳಿಸಿದರು.

ಇಂದು ಜರುಗಿದ ಸಮಾರಂಭದಲ್ಲಿ ತಮಿಳುನಾಡಿನ 20 ಮಂದಿ, ಆಂಧ್ರಪ್ರದೇಶದ 10 ಹಾಗೂ ಕೇರಳದ 2 ಸೇರಿದಂತೆ 300ಕ್ಕೂ ಅಧಿಕ ಮಂದಿ ಬೌದ್ಧಧರ್ಮ ದೀಕ್ಷೆ ಸ್ವೀಕರಿಸಿದ್ದು, ಬಿಹಾರ ರಾಜ್ಯದ ಪದವೀಧರ ರಾಜೇಶ್ ಕುಮಾರ್ ಎಂಬವರು ಬೌದ್ಧ ಬಿಕ್ಕು ದೀಕ್ಷೆ ಸ್ವೀಕರಿಸಿದ್ದು, ದಮ್ಮಜ್ಯೋತಿ ಎಂದು ಮರುನಾಮಕರಣಗೊಂಡಿದ್ದಾರೆ ಎಂದ ವೆಂಕಟಸ್ವಾಮಿ, ಬಿಕ್ಕುಣಿ ಬುದ್ಧಮ್ಮ, ಬಿಕ್ಕು ಮಾತಾಮೈತ್ರಿ ಹಾಗೂ ಬಿಕ್ಕು ಜ್ಞಾನಲೋಕ ದಮ್ಮದೀಕ್ಷೆ ಬೋಧಿಸಿದರು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಭಗವಾನ್ ಬುದ್ಧರಥದೊಂದಿಗೆ ನಗರದ ಪುರಭವನದಿಂದ ವಿಧಾನಸೌಧದ ಬಳಿಯ ಅಂಬೇಡ್ಕರ್ ಪುತ್ಥಳಿಯ ವರೆಗೆ ಬೈಕ್ ರ‍್ಯಾಲಿ ಮೂಲಕ ಹೊರಟು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಅಲ್ಲಿಂದ ಸದಾಶಿವನಗರದ ನಾಗಸೇನಾ ಬುದ್ಧ ವಿಹಾರದಲ್ಲಿ ದೀಕ್ಷಾ ಸಮಾರಂಭ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಾಬುರಾವ್ ಮುಡಬಿ, ಐಪಿಎಸ್ ಅಧಿಕಾರಿ ಡಾ.ಸುಭಾಶ್ ಭರಣಿ, ಐಎಫ್ಎಸ್ ಅಧಿಕಾರಿ ಡಾ. ರಾಜು, ಮಲ್ಲಿಕಾರ್ಜುನ ಬಾಲ್ಕೆ, ಹ.ರಾ.ಮಹೇಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News