ಕೋವಿಡ್-19 ಹರಡದಂತೆ ಜಾಗೃತಿ ಮೂಡಿಸಿ: ಡಾ:ಪಿ.ಎಸ್.ಹರ್ಷ

Update: 2020-10-14 18:21 GMT

ಬೆಂಗಳೂರು, ಅ. 14: ಕೋವಿಡ್-19 ಮಾರಕ ರೋಗ ಹರಡದಂತೆ ಕೈಗೊಳ್ಳಬೇಕಾದ ಜಾಗೃತಿ ಕುರಿತ ಪ್ರತಿಜ್ಞಾ ವಿಧಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬೋಧಿಸಿದರು.

ಬುಧವಾರ ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಮಾತನಾಡಿದ ಅವರು, ನಾವು ಎಷ್ಟು ಮುನ್ನೆಚ್ಚರಿಕೆ ವಹಿಸುತ್ತೇವೆಯೋ ಅಷ್ಟೇ ಸುರಕ್ಷಿತರಾಗಿರುತ್ತೇವೆ, ಜೊತೆಗೆ ನಮ್ಮ ಕುಟುಂಬ ಮತ್ತು ನಮ್ಮ ಸುತ್ತಮುತ್ತಲ ಜನರನ್ನು ಈ ಕೋವಿಡ್ ಸೋಂಕಿನಿಂದ ರಕ್ಷಿಸುತ್ತೇವೆ ಎಂದರು.

ಹಿರಿಯ ನಾಗರಿಕರು, ಮಕ್ಕಳು ಇರುವ ಕುಟುಂಬದವರು ಮುಂಜಾಗ್ರತೆಯಾಗಿ ಮನೆಯಲ್ಲಿ ಥರ್ಮಾಮೀಟರ್ ಮತ್ತು ಪಲ್ಸ್ ಆಕ್ಸಿಮೀಟರನ್ನು ಇಟ್ಟುಕೊಳ್ಳಬೇಕು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನೀರು ಮತ್ತು ಸಾಬೂನಿನಿಂದ ಪದೇ ಪದೇ ಕೈ ಕೈತೊಳೆಯಬೇಕು. ಸ್ಯಾನಿಟೈಸರ್ ಬಳಸಬೇಕು. ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗೆ ಹೋಗಬೇಕು ಎಂದು ಅವರು ಸಲಹೆ ಮಾಡಿದರು.

ಯಾವುದೇ ರೋಗ ಲಕ್ಷಣ ಇಲ್ಲದ ವ್ಯಕ್ತಿಯೂ ಈ ಸೋಂಕನ್ನು ಬೇರೆಯವರಿಗೆ ಹರಡುವ ಸಾಧ್ಯತೆ ಇರುವುದರಿಂದ ಎಲ್ಲರೂ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರಬೇಕು. ಎಲ್ಲರೂ ಕೋವಿಡ್-19 ವಿರುದ್ಧ ಜಯ ಸಾಧಿಸೋಣ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಜಂಟಿ ನಿರ್ದೇಶಕ ಎ.ಆರ್.ಪ್ರಕಾಶ್, ಉಪನಿರ್ದೇಶಕ ಪುಟ್ಟಸ್ವಾಮಯ್ಯ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News