ಹತ್ರಸ್‍ ಪ್ರಕರಣ: ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ಸಮಿತಿಗೆ ವಹಿಸಲು ಎಐಎಂಎಸ್‍ಎಸ್ ಒತ್ತಾಯ

Update: 2020-10-14 18:23 GMT

ಬೆಂಗಳೂರು, ಅ.14: ಉತ್ತರ ಪ್ರದೇಶದ ಹತ್ರಸ್‍ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಹಾಗೂ ಸಾವು ಪ್ರಕರಣದ ನಿಷ್ಪಕ್ಷ ತನಿಖೆಗೆ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿಗೆ ವಹಿಸಬೇಕೆಂದು ಎಐಎಂಎಸ್‍ಎಸ್(ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ) ರಾಜ್ಯ ಕಾರ್ಯದರ್ಶಿ ಶೋಭಾ ಒತ್ತಾಯಿಸಿದ್ದಾರೆ.

ಬುಧವಾರ ಎಐಎಂಎಸ್‍ಎಸ್ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ನಗರದ ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆ ಮುಂಭಾಗ ಆಯೋಜಿಸಿದ್ದ ಅಖಿಲ ಭಾರತ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹತ್ರಸ್‍ ಘಟನೆ ನಡೆದು ಇಂದಿಗೆ ಒಂದು ತಿಂಗಳಾಗಿದೆ. ಈ ಘಟನೆಯ ನಂತರ ಪೋಲಿಸರು ದುಷ್ಕರ್ಮಿಗಳನ್ನು ರಕ್ಷಿಸುವ ಹುನ್ನಾರ ನಡೆದಿದ್ದು, ಇದು ಅತ್ಯಂತ ಖಂಡನಾರ್ಹ ವಿಚಾರವಾಗಿದೆ. ದುಷ್ಕರ್ಮಿಗಳಿಗೆ ಕಠಿಣವಾದ ಶಿಕ್ಷೆಯಾಗುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಎಐಎಂಎಸ್‍ಎಸ್‍ನ ಬೆಂಗಳೂರು ಜಿಲ್ಲಾ ಸೆಕ್ರೆಟೇರಿಯಟ್ ಸದಸ್ಯೆ ಸಿಂಧೂ ಮಾತನಾಡಿ, ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ಯಾವುದೇ ಭದ್ರತೆ ಇಲ್ಲ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಅದರ ಬೆನ್ನಲ್ಲೇ ಸರಣಿಯಾಗಿ ಅತ್ಯಾಚಾರದ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದರೂ ಸಹ ಸರಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ದಿನಗಳ ಹಿಂದೆ ಬಿಹಾರದಲ್ಲಿ ಕೆಲವು ದುಷ್ಕರ್ಮಿಗಳು ಒಬ್ಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆಕೆಯ ಐದು ವರ್ಷದ ಮಗುವನ್ನು ಕಾಲುವೆಗೆ ಎಸೆದಿದ್ದರು. ಇಂತಹ ಅಮಾನವೀಯ ಘಟನೆಗಳು ಪ್ರತಿದಿನವೂ ನಡೆಯುತ್ತಲೇ ಇವೆ. 2019ರಲ್ಲಿ 1.62 ಲಕ್ಷ ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದಲ್ಲಿದ್ದವು. ಇದರಲ್ಲಿ ಶೇ.89.5ರಷ್ಟು ಪ್ರಕರಣಗಳ ವಿಚಾರಣೆಯೇ ಆರಂಭವಾಗಿಲ್ಲ. ಇಂಥ ಸಂದರ್ಭದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗಲು ಹೇಗೆ ಸಾಧ್ಯವೆಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News