ಹತ್ರಸ್ ಸಂತ್ರಸ್ತೆ ದಾಖಲಾಗಿದ್ದ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಮಾಯ : ಸಿಬಿಐ

Update: 2020-10-15 04:06 GMT

ಆಗ್ರಾ : ಹತ್ರಸ್ ನಲ್ಲಿ ಸಂಭವಿಸಿದ ಹತ್ತೊಂಬತ್ತು ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಆಘಾತ ಎದುರಾಗಿದೆ. ಸಂತ್ರಸ್ತೆಯನ್ನು ಮೊದಲು ದಾಖಲಿಸಿದ್ದ ಈ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಇಡೀ ಪ್ರಕರಣದಲ್ಲಿ ಮಹತ್ವದ ಪುರಾವೆಯಾಗಿತ್ತು. ಆದರೆ ಸಿಸಿಟಿವಿ ದೃಶ್ಯಾವಳಿ ಮಾಯವಾಗಿರುವುದು ಸಿಬಿಐ ತನಿಖಾ ತಂಡಕ್ಕೆ ತಿಳಿದುಬಂತು.

ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆತಂದ ಸೆಪ್ಟೆಂಬರ್ 14ರ ಸಿಸಿಟಿವಿ ದೃಶ್ಯಾವಳಿಯ ಬ್ಯಾಕ್ ಅಪ್ ಲಭ್ಯ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

"ಜಿಲ್ಲಾಡಳಿತ ಮತ್ತು ಪೊಲೀಸರು ಆ ದಿನದ ದೃಶ್ಯಾವಳಿಯನ್ನು ಕೇಳಿರಲಿಲ್ಲ. ಇದೀಗ ಒಂದು ತಿಂಗಳ ಬಳಿಕ ನಾವು ಅದನ್ನು ನೀಡಲು ಸಾಧ್ಯವಿಲ್ಲ" ಎಂದು ಮುಖ್ಯ ವೈದ್ಯಕೀಯ ಅಧೀಕ್ಷಕ ಇಂದ್ರವೀರ್ ಸಿಂಗ್ ಹೇಳಿದ್ದಾರೆ. ಅದಕ್ಕೆ ಮೊದಲೇ ಕೇಳಿದ್ದರೆ ಆಸ್ಪತ್ರೆ ಅದನ್ನು ಸಂರಕ್ಷಿಸಿ ಇಡುತ್ತಿತ್ತು ಎಂದು ಅವರು ತಿಳಿಸಿದ್ದಾರೆ. "ಆಸ್ಪತ್ರೆಯ ಸಿಸಿಟಿವಿ ವ್ಯವಸ್ಥೆಯಲ್ಲಿ ಹಿಂದಿನ ಏಳು ದಿನಗಳ ದೃಶ್ಯಾವಳಿಗಳು ಡಿಲೀಟ್ ಆಗಿ ಹೊಸ ದೃಶ್ಯಾವಳಿಗಳು ದಾಖಲೀಕರಣಗೊಳ್ಳುತ್ತವೆ" ಎಂದು ವಿವರಿಸಿದ್ದಾರೆ.

ವೈದ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಮತ್ತು ಪುರಾವೆಗಳ ಪರಿಶೀಲನೆಗಾಗಿ ಸಿಬಿಐ ತಂಡ ಆಸ್ಪತ್ರೆಗೆ ಭೇಟಿ ನೀಡಿತ್ತು. ಮೊದಲ ದಿನದ ದೃಶ್ಯಾವಳಿ ಪ್ರಮುಖವಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಂತ್ರಸ್ತೆಯನ್ನು ಯಾವಾಗ ಆಸ್ಪತ್ರೆಗೆ ಕರೆ ತರಲಾಗಿತ್ತು, ಯಾವಾಗ ಆಸ್ಪತ್ರೆಯಿಂದ ಹೊರಗೆ ಒಯ್ಯಲಾಯಿತು, ಯಾವ ವೈದ್ಯರು ಆಕೆಗೆ ಚಿಕಿತ್ಸೆ ನೀಡಿದ್ದರು, ಆಕೆಯ ಜತೆ ಯಾರೆಲ್ಲ ಮಾತನಾಡಿದ್ದರು ಎಂಬ ವಿಷಯಗಳನ್ನು ತಿಳಿದುಕೊಳ್ಳಲು ಆ ದಿನದ ಸಿಸಿಟಿವಿ ದೃಶ್ಯಾವಳಿ ಪ್ರಮುಖ ದಾಖಲೆಯಾಗಿತ್ತು ಎಂದು ಹೇಳಲಾಗಿದೆ.

ಈ ಮೊದಲು ಜಿಲ್ಲಾಡಳಿತ ಹಾಗೂ ಪೊಲೀಸರು ಏಕೆ ಸಿಸಿಟಿವಿ ದೃಶ್ಯಾವಳಿ ಕೇಳಿರಲಿಲ್ಲ ಎಂದು ಪ್ರಶ್ನಿಸಿದಾಗ, ಅಪರಾಧ ಸಂಬಂಧಿ ತನಿಖೆಯಲ್ಲಿ ಆಸ್ಪತ್ರೆಯ ಪಾತ್ರ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ಉತ್ತರಿಸಿದರು.

"ಆಸ್ಪತ್ರೆಯಲ್ಲಿ ಅಪರಾಧ ಕೃತ್ಯ ನಡೆದಿಲ್ಲ ಎಂದಾದರೆ ಅಥವಾ ವೈದ್ಯರ ನಿರ್ಲಕ್ಷ್ಯದ ಆರೋಪ ಇಲ್ಲದಿದ್ದಲ್ಲಿ, ಅಪರಾಧ ತನಿಖೆಯಲ್ಲಿ ಆಸ್ಪತ್ರೆಗೆ ಯಾವ ಸಂಬಂಧವೂ ಇಲ್ಲ. ಇದು ಸಂಬಂಧಪಡದ ವಿಷಯಗಳು. ಆದ್ದರಿಂದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಗಣಿಸಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News