ಧರಣಿ ಕೈಬಿಡುವಂತೆ ಪಿಯು ಉಪನ್ಯಾಸಕರಿಗೆ ಸಚಿವ ಸುರೇಶ್ ಕುಮಾರ್ ಮನವಿ

Update: 2020-10-15 13:57 GMT

ಬೆಂಗಳೂರು, ಅ.15: ಪಿಯು ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಕುರಿತಂತೆ ಸರಕಾರಕ್ಕೆ ಅಪಾರ ಕಾಳಜಿಯಿದ್ದು, ಕಾಲೇಜುಗಳು ಆರಂಭವಾದ ಕೂಡಲೇ ನೇಮಕಾತಿ ಆದೇಶ ನೀಡಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

ನೇಮಕಾತಿ ಆದೇಶಕ್ಕಾಗಿ ಆಗ್ರಹಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಪದವಿ ಪೂರ್ವ ಉಪನ್ಯಾಸಕರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪ್ರತಿನಿಧಿಗಳೊಂದಿಗೆ ಸದ್ಯ ತಾವು ಕ್ವಾರಂಟೈನ್‍ನಲ್ಲಿರುವ ಆಸ್ಪತ್ರೆಯಿಂದಲೇ ಅವರು ಮಾತನಾಡಿದರು.

ತಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ನನೆಗುದಿಗೆ ಬಿದ್ದಿದ್ದ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಚುರುಕು ಮುಟ್ಟಿಸಿ ಪ್ರಕ್ರಿಯೆ ಪೂರ್ಣಗೊಳಿಸಿದ್ದನ್ನು ವಿವರಿಸಿದ ಅವರು, ಸರಕಾರದ ಭರವಸೆಯ ಹಿನ್ನೆಲೆಯಲ್ಲಿ ಧರಣಿ ಕೈಬಿಡಬೇಕೆಂದು ಮನವಿ ಮಾಡಿದರು.

ಈ ಕುರಿತಂತೆ ನಮ್ಮ ಸರಕಾರವು ತೆಗೆದುಕೊಂಡಿರುವ ಆಸ್ಥೆ ಮತ್ತು ಕ್ರಮಗಳ ಕುರಿತು ತಮಗೆಲ್ಲ ಗೊತ್ತಿದೆ. ತಾವೆಲ್ಲ ಮುಂದೆ ಕನಿಷ್ಠ 20-30 ವರ್ಷಗಳ ಕಾಲ ನಮ್ಮೆಲ್ಲಾ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಜವಾಬ್ದಾರಿಯುಳ್ಳವರು. ಕೊರೋನ ಹಿನ್ನೆಲೆಯಲ್ಲಿ ಅಸ್ತಿತ್ವದಲ್ಲಿರುವ ಆರ್ಥಿಕ ಮಿತವ್ಯಯ ಆದೇಶದ ಮಧ್ಯೆಯೂ ಆರ್ಥಿಕ ಇಲಾಖೆಯ ವಿಶೇಷ ಅನುಮತಿ ಪಡೆದು ಸರಕಾರ, ಕೌನ್ಸೆಲಿಂಗ್ ಸೇರಿದಂತೆ ನೇಮಕಾತಿಯ ಎಲ್ಲ ಪೂರ್ವಭಾವಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ ಎಂದು ಅವರು ಹೇಳಿದರು.

ಶಾಲಾ ಕಾಲೇಜುಗಳು ಆರಂಭವಾದ ಕೂಡಲೇ ಸ್ಥಳ ನಿಯುಕ್ತಿ ಪಡೆದಿರುವ ಎಲ್ಲ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದು ಧರಣಿ ನಿರತ ಅಭ್ಯರ್ಥಿಗಳಿಗೆ ಸುರೇಶ್ ಕುಮಾರ್ ತಿಳಿಸಿದರು.

ತಮ್ಮ ಕೋರಿಕೆ ಮೇರೆಗೆ ಉನ್ನತ ಶಿಕ್ಷಣ ಇಲಾಖೆ ಸಚಿವರೂ ಆದ ರಾಜ್ಯದ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿ, ಹಲವಾರು ವರ್ಷ ನೆನೆಗುದಿಗೆ ಬಿದ್ದಿದ್ದ ಉಪನ್ಯಾಸಕರ ನೇಮಕ ಪ್ರಕ್ರಿಯೆ ಕುರಿತಂತೆ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ತಕ್ಷಣವೇ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದ್ದಾರೆಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಭರವಸೆ ನೀಡಿದ್ದು, ಯಾವುದೇ ಆತಂಕಕ್ಕೆ ಅವಕಾಶವಿಲ್ಲ. ಸರಕಾರದ ಮನವಿಗೆ ಸ್ಪಂದಿಸಿ ಧರಣಿ ಕೈಬಿಡಬೇಕು. ಇಂದು ಈ ವಿಷಯವಾಗಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರೂ ನನ್ನೊಂದಿಗೆ ಮಾತನಾಡಿದಾಗಲೂ ಅವರಿಗೂ ಆತಂಕಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದೇನೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News