×
Ad

ಕೊರೋನ ನಿಯಮ ಉಲ್ಲಂಘಿಸಿ ರೈತರ ರ‍್ಯಾಲಿ: ಕೈಗೊಂಡ ಕ್ರಮದ ಬಗ್ಗೆ ವಿವರಣೆ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

Update: 2020-10-15 22:26 IST

ಬೆಂಗಳೂರು, ಅ.15: ಕೃಷಿ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ವಿರೋಧಿಸಿ ಸೆ.28ರಂದು ಬೆಂಗಳೂರಿನಲ್ಲಿ ನಡೆದ ರ‍್ಯಾಲಿಯಲ್ಲಿ ಸುರಕ್ಷಿತ ಅಂತರ ಮತ್ತು ಮಾಸ್ಕ್ ಧರಿಸದೆ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕೈಗೊಂಡಿರುವ ಕ್ರಮಗಳ ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಬನಶಂಕರಿ ಒಂದನೆಯ ಹಂತದ ನಿವಾಸಿ ಸಾಯಿ ದತ್ತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿ ಅವರಿದ್ದ ನ್ಯಾಯಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ.

ಅರ್ಜಿದಾರರ ಪರ ವಾದಿಸಿದ ವಕೀಲರು, ಕೃಷಿ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ರ‍್ಯಾಲಿಗಳಲ್ಲಿ ಭಾಗವಹಿಸಿದ್ದ ರೈತ, ಕಾರ್ಮಿಕ ಮುಖಂಡರು ಹಾಗೂ ಪ್ರತಿಭಟನಾಕಾರರು ಸುರಕ್ಷಿತ ಅಂತರ ಹಾಗೂ ಮಾಸ್ಕ್ ಧರಿಸದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕೊರೋನ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪೊಲೀಸರು ರ‍್ಯಾಲಿಗೆ ಅವಕಾಶ ನೀಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಸಂಸದ ತೇಜಸ್ವಿ ಸೂರ್ಯ ಆಯ್ಕೆಯಾದ ಬಳಿಕ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೇಜಸ್ವಿ ಸೂರ್ಯ ಅವರ ಮೆರವಣಿಗೆ ಮಾಡಿದ್ದಾರೆ. ನೂರಾರು ಜನ ಸೇರಿ ಮೆರವಣಿಗೆ ಮಾಡುವ ಮೂಲಕ ಕೊರೋನ ನಿಯಮ ಉಲ್ಲಂಘಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News