ಆರ್.ಆರ್.ನಗರ ಫಲಿತಾಂಶ ಬಿಬಿಎಂಪಿ ಚುನಾವಣೆಯ ದಿಕ್ಸೂಚಿ: ಸಚಿವ ಡಾ.ಕೆ.ಸುಧಾಕರ್

Update: 2020-10-15 16:57 GMT

ಬೆಂಗಳೂರು, ಅ. 15: ಯಾವುದೇ ಅಭ್ಯರ್ಥಿ ವಿರುದ್ಧ ಪೊಲೀಸ್ ಕೇಸು ದಾಖಲಿಸಿ ರಾಜಕಾರಣ ಮಾಡುವ ಅನಿವಾರ್ಯತೆ ನಮಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊದಲ ಸಲ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ನನ್ನ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದ್ದರು. ಮೂರು ವರ್ಷ ಅದರ ವಿರುದ್ಧ ಹೋರಾಟ ನಡೆಸಿದೆ. ಹೀಗಾಗಿ ದುರುದ್ದೇಶಪೂರಿತವಾಗಿ ಕೇಸು ದಾಖಲಿಸಲಾಗಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.

ವಾಸ್ತವವಾಗಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಮುನಿರತ್ನ ಈಗಾಗಲೇ ಗೆದ್ದಾಗಿದೆ. ಅವರು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆಯೇ ಅವರಿಗೆ ಹಿಂದಿಗಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ತಂದುಕೊಡಲಿದೆ. ಹೀಗಿರುವಾಗ ಕೇಸು ದಾಖಲಿಸಿ ಹಿಂಬಾಗಿಲ ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದು ಸುಧಾಕರ್ ಇದೇ ವೆಳೆ ಹೇಳಿದರು.

ಜನರನ್ನು ದಾರಿತಪ್ಪಿಸಿ ಮತ ಹಾಕಿಸಿಕೊಳ್ಳಲು ಇದು ಕನಕಪುರ ಅಲ್ಲ. ಇಲ್ಲಿರುವ ಪ್ರಜ್ಞಾವಂತ ಮತದಾರರು ಅಭಿವೃದ್ಧಿ ಪರವಾಗಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವನ್ನು ಬೆಂಬಲಿಸಲಿದ್ದಾರೆ. ನೂತನವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿರುವ ಕಾರಣಕ್ಕೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ನಮ್ಮ ವಿರುದ್ಧ ಜನರ ಮುಂದೆ ಪ್ರತಿಪಾದಿಸಲು ಯಾವುದೇ ವಿಷಯಗಳಿಲ್ಲ ಎಂದು ಸುಧಾಕರ್ ಲೇವಡಿ ಮಾಡಿದರು.

ಈ ಉಪ ಚುನಾವಣೆ ಮುಂಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಪಾಲಿಕೆ ಚುನಾವಣೆಯಲ್ಲೂ ಪಕ್ಷ ಗೆಲುಪು ಸಾಧಿಸಿ ಅಧಿಕಾರ ಹಿಡಿಯುವುದು ನಿಶ್ಚಿತ ಎಂದ ಅವರು, ಕೇಂದ್ರದಲ್ಲಿ ಮೋದಿಯವರ  ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರಗಳು ಕೈಗೊಂಡಿರುವ ಜನಪರ ಕಾರ್ಯಕ್ರಮಗಳು ಮತದಾರರ ಮನ ಗೆದ್ದಿವೆ. ಉಪ ಚುನಾವಣಾ ಫಲಿತಾಂಶದಲ್ಲಿ ಅದು ಬಿಂಬಿತವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News