ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬ: ವ್ಯಾಪಾರಿಗಳಿಂದ ಪರಿಹಾರಕ್ಕೆ ಒತ್ತಾಯ, ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

Update: 2020-10-15 18:09 GMT

ಬೆಂಗಳೂರು, ಅ.15: ಕಳೆದ 8 ತಿಂಗಳಿನಿಂದ ಕಮರ್ಷಿಯಲ್ ಸ್ಟ್ರೀಟ್ ಹಾಗೂ ಕಾಮರಾಜ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ನಡೆಯುತ್ತಿರುವ ಕಾಮಗಾರಿಯ ವಿಳಂಬದಿಂದಾಗಿ ವ್ಯಾಪಾರಿಗಳು ಹೈರಾಣಾಗಿದ್ದು, ಹಬ್ಬಗಳು ಹತ್ತಿರ ಬಂದರೂ ಸರಿಯಾಗಿ ವ್ಯಾಪಾರ ನಡೆಯದೆ ಕಂಗಾಲಾಗಿದ್ದಾರೆ. ಇದಕ್ಕೆ ಬೆಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯೇ ಕಾರಣ ಎಂದು ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಸ್ಥಳೀಯ ವ್ಯಾಪಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಗುತ್ತಿಗೆದಾರರು ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವ್ಯಾಪಾರಿಗಳು, ಲಾಕ್‍ಡೌನ್‍ಗೂ ಮುಂಚಿತವಾಗಿ ಪ್ರಾರಂಭವಾದ ಈ ಕಾಮಗಾರಿ ಇದುವರೆಗೂ ಮುಗಿದಿಲ್ಲ. ಅಧಿಕಾರಿಗಳಿಗೆ ಯಾವಾಗ ಮುಗಿಯುತ್ತದೆ ಎಂದು ಕೇಳಿದರೆ ಮಾತೇ ಆಡುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದರು.

ಯಾವ ಕಾಮಗಾರಿ ನಡೆಯುತ್ತಿದೆ ಎನ್ನುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇಲ್ಲ. ಅಲ್ಲದೇ ಕೆಲಸದ ಉಸ್ತುವಾರಿ ವಹಿಸಿಕೊಂಡಿರುವ ಮೇಸ್ತ್ರಿಗಳು ಉಡಾಫೆಯ ಉತ್ತರ ನೀಡುತ್ತಾರೆ. ಅಂಗಡಿಗೆ ತೆರಳಲು ಸಣ್ಣ ಜಾಗವನ್ನು ಬಿಡದೆ ಆಕ್ರಮಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ವ್ಯಾಪಾರಿ ಇಮ್ರಾನ್ ದೂರಿದರು.

ಲಾಕ್‍ಡೌನ್‍ನಿಂದ ವ್ಯಾಪಾರ ಹಾಳಗಿದ್ದಕ್ಕಿಂತ ಈ ರಸ್ತೆ ಕಾಮಗಾರಿಯಿಂದ ನಮಗೆ ಹೆಚ್ಚು ತೊಂದರೆ ಆಗಿದೆ, ಲಕ್ಷಾಂತರ ರೂಪಾಯಿ ನಷ್ಟ ಆಗಿದೆ. ಈ ನಷ್ಟವನ್ನು ಸ್ಮಾರ್ಟ್ ಸಿಟಿ ಇಲಾಖೆಯಿಂದ ತುಂಬಿ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಸಾಲು, ಸಾಲು ಹಬ್ಬಗಳಿದ್ದು ಹಬ್ಬಗಳು ಬರುವ ಹೊತ್ತಿಗೆ ಕಾಮಗಾರಿ ಮುಗಿಸಬೇಕು ಹಾಗೂ ಕಾಮಗಾರಿಯಿಂದ ನಷ್ಟ ಉಂಟಾಗಿರುವ ವ್ಯಾಪಾರಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸರಣಿ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆಯಲ್ಲಿ ಸಂಪಂಗಿ ರಾಮನಗರ ವಾರ್ಡ್ ಅಧ್ಯಕ್ಷ ಪ್ರಕಾಶ್ ನೆಡಂಗಡಿ, ವಸಂತ್ ನಗರ ವಾರ್ಡ್ ಅಧ್ಯಕ್ಷೆ ಜನನಿ ಭರತ್, ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಾವಲಿ, ಮುಖಂಡರಾದ ಇಕ್ಬಾಲ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News