ರಾಜ್ಯೋತ್ಸವ ಪ್ರಶಸ್ತಿ ನೀಡದಿರಬೇಡಿ

Update: 2020-10-16 09:13 GMT

ಮಾನ್ಯರೇ,

ಕರ್ನಾಟಕ ಸರಕಾರವು ಕೊರೋನದ ಈ ದುರಿತ ಕಾಲದಲ್ಲೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ರಚಿಸಿ ಪ್ರಕ್ರಿಯೆ ನಡೆಸಿದೆ. ಅದಕ್ಕಾಗಿ ಧನ್ಯವಾದಗಳು. ಆದರೆ ಬೆರಳೆಣಿಕೆಯಷ್ಟು ಜನರು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡುವುದು ಬೇಡ ಎಂಬಿತ್ಯಾದಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಿ ಈಗಾಗಲೇ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡ ಮಹನೀಯರೂ ಇದ್ದಾರೆ. ಈ ಪ್ರಶಸ್ತಿ ನೀಡುವಿಕೆಗೆ ಕೊರೋನ ವಿಚಾರ ಮುಂದೆ ಮಾಡಿ ಅಡ್ಡಗಾಲು ಹಾಕುವುದು ಏಕಮುಖ ಅಭಿಪ್ರಾಯಕ್ಕೆ ಅವಕಾಶ ನೀಡುತ್ತದೆಯೇ ಹೊರತು ಬಹುಮುಖ ಆಶಯ ಹೊಂದಿಲ್ಲದಿರುವುದು ವಾಸ್ತವಾಂಶ. ಕಲಾವಿದರು ಮೂಲತಃ ಭಾವಜೀವಿಗಳು. ಪ್ರಶಸ್ತಿ-ಪುರಸ್ಕಾರ ಅವರಲ್ಲಿನ ಜೀವನೋತ್ಸಾಹ, ಕಾಲಾಪ್ರೇಮ ವೃದ್ಧಿಸುತ್ತದೆ. ಆರ್ಥಿಕವಾಗಿ ಬಸವಳಿದ ಬಡ ಕಲಾವಿದರ ಬದುಕಿಗೆ ಈ ಪ್ರಶಸ್ತಿಯಿಂದ ಸಿಗುವ ನಗದು ಕೆಲ ದಿನಗಳ ಅವರ ಜೀವನ ಬವಣೆ ನೀಗಬಲ್ಲದ್ದಾಗಿದೆ. ಸುರಕ್ಷಿತ ಅಂತರ ಪಾಲಿಸುವ ಮೂಲಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನವನ್ನು ಯಶಸ್ವಿಯಾಗಿ ತಾವು ನಡೆಸಬಹುದು ಎಂಬುದು ಸಕಾರಾತ್ಮಕ ಅಪೇಕ್ಷೆ, ಸಹಜ ನಿರೀಕ್ಷೆಯಾಗಿದೆ. ಈ ಹಿಂದೆ ಮೈಸೂರಿನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಿದಾಗ ಬರಗಾಲ ಇದ್ದ ಸಂದರ್ಭಕ್ಕೆ ಸಮ್ಮೇಳನ ನಡೆಸುವುದೋ ಬೇಡವೋ ಎಂಬ ಪ್ರಶ್ನೆ ಎದುರಾದಾಗ ಡಾ. ಶಿವರಾಮ ಕಾರಂತರು ‘‘ಬರಗಾಲ ಇದೆ ಎಂಬ ಕಾರಣಕ್ಕೆ ಮಸಾಲೆ ದೋಸೆ ತಿನ್ನುವುದನ್ನು ನಿಲ್ಲಿಸಿದ್ದಾರೆಯೇ?’’ ಎಂದು ವ್ಯವಸ್ಥೆಯನ್ನು ಪ್ರಶ್ನಿಸಿ ಸಮ್ಮೇಳನಕ್ಕೆ ಬೆಂಬಲ ಘೋಷಿಸಿದ್ದರು. ಆದ್ದರಿಂದ ಈ ಬಾರಿ ಕಲಾವಿದರ ಬದುಕಿಗೆ ಬರೆ ಬೀಳುವುದು ಬೇಡ. ಯಾವುದೇ ಸಂದರ್ಭದಲ್ಲೂ ಕಲೆ ಸಂಸ್ಕೃತಿಯನ್ನು ಉಳಿಸಲು ಸರಕಾರ ಆದ್ಯತೆ ನೀಡಬೇಕಾಗಿದೆ. ಸರಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸೂಕ್ತ ಮುನ್ನೆಚ್ಚರಿಕೆ ಕ್ರಮದೊಂದಿಗೆ ನೀಡಬೇಕಾಗಿದೆ.

Similar News