ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದದ್ದೇ ಮೋದಿ ಸಾಧನೆ: ಕುಮಾರಸ್ವಾಮಿ ಕಿಡಿ

Update: 2020-10-16 17:07 GMT

ಬೆಂಗಳೂರು, ಅ.16: ದೀಪ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದಿರುವುದೇ ಈ ರಾಷ್ಟ್ರಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆ. ಅದರಿಂದ ಕೊರೋನ ಹೋಗಲಿಲ್ಲ, ಬದಲಿಗೆ ರಾಷ್ಟ್ರದಲ್ಲಿ ಪಾಸಿಟಿವ್‌ ಕೇಸ್‌ಗಳ ಸಂಖ್ಯೆ ಹೆಚ್ಚಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರದ ವಿರುದ್ಧ ಕಿಡಿಕಾರಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜ್ಞಾನಭಾರತಿ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಕಲಿ ವೋಟರ್‌ ಐಡಿ ಪ್ರಕರಣದಲ್ಲಿ ಮೋದಿಯೇ ಟೀಕಿಸಿದ್ದ ವ್ಯಕ್ತಿಯನ್ನು ಬಿಜೆಪಿಯವರು ಈ ಬಾರಿ ಅಭ್ಯರ್ಥಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಇನ್ನು, ಉತ್ತರ ಕರ್ನಾಟಕದಲ್ಲಿ ಒಂದು ವಾರದಿಂದ ಪ್ರವಾಹ ಪರಿಸ್ಥಿತಿಯಿದ್ದರೂ ರಾಜ್ಯದ ಜೊತೆ ಪ್ರಧಾನಿ ಮೋದಿ ಚರ್ಚಿಸಿಲ್ಲ. ಆದರೆ, ಪಕ್ಕದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಸಿಎಂಗಳ ಜೊತೆ ಮಾತನಾಡಿ ಅವರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆದರೆ, ನಮ್ಮ ರಾಜ್ಯ ಏನು ಮಾಡಿತ್ತು. ಆದ್ದರಿಂದ ರಾಷ್ಟ್ರೀಯ ಪಕ್ಷಗಳ ವ್ಯಾಮೋಹ ಬಿಟ್ಟುಬಿಡಿ. ರಾಜ್ಯದ ಗೌರವ ಕಾಪಾಡುವ ಜೆಡಿಎಸ್‌ ಮೇಲೆ ನಂಬಿಕೆಯಿಡಿ ಎಂದು ಹೇಳಿದರು.

ಬೆಂಗಳೂರಿಗೆ ಜೆಡಿಎಸ್‌ ಬಹಳ ದೊಡ್ಡ ಕೊಡುಗೆ ನೀಡಿದೆ. ಕೊರೋನ ಸಮಯದಲ್ಲಿ ಸರಕಾರ ಯಾರಿಗೆ ನೆರವಾಗಿದೆ. ಸರಕಾರ ಘೋಷಿಸಿದ ಕೊರೋನ ಪ್ಯಾಕೇಜ್‌ ಎಷ್ಟು ಜನಕ್ಕೆ ತಲುಪಿದೆ. ಕೊರೋನ ಸಮಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದರೆ 50 ಲಕ್ಷ ಕುಟುಂಬಗಳಿಗೆ 10 ಸಾವಿರ ರೂ. ನೀಡುತ್ತಿದ್ದೆ ಎಂದು ಹೇಳಿದರು.

ಈ ಚುನಾವಣೆ ನನಗೂ ಸತ್ವಪರೀಕ್ಷೆ ಇದ್ದಂತೆ, ಪ್ರಾಮಾಣಿಕ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದ್ದೇವೆ. ಮುನಿರತ್ನ ಕೆಲಸವೇ ಮಾಡದೇ 250 ಕೋಟಿ ರೂ. ಲೂಟಿ ಮಾಡಿದ್ದಾರೆ. ಪಾಪದ ದುಡ್ಡಿನಿಂದ ಆಹಾರ ಕಿಟ್‌ ನೀಡಿದ್ದಾರೆ. ಅವರೇನು ತಮ್ಮ ಜೇಬಿನಿಂದ ನಿಮಗೆ ಫುಡ್ ಕಿಟ್ ಕೊಟ್ಟಿಲ್ಲ, ನಿಮ್ಮ ದುಡ್ಡು ಲೂಟಿ ಮಾಡಿ ಕೊಟ್ಟಿದ್ದಾರೆ ಎಂದು ಮುನಿರತ್ನ ವಿರುದ್ಧ ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು.

ಇನ್ನು, ಈ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣಮೂರ್ತಿ ನಾನು ಖಂಡಿತ ಹರಕೆ ಕುರಿಯಲ್ಲ ಎಂದು ಭಾವುಕರಾದರು. ನನ್ನನ್ನು ಹರಕೆ ಕುರಿ ಎಂದು ಕರೆಯುತ್ತಿದ್ದಾರೆ. ನಾನು ದುಡ್ಡು ತೆಗೆದುಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ ಎಂದಿದ್ದಾರೆ. ನನಗೆ ಏನು ಬೇಕಾದರೂ ಹೇಳಲಿ. ಆದರೆ, ಕುಮಾರಸ್ವಾಮಿ ಬಗ್ಗೆ ಏನೂ ಹೇಳಬೇಡಿ. ನಿಷ್ಠಾವಂತ ಕಾರ್ಯಕರ್ತನಿಗೆ ಪಕ್ಷ ಟಿಕೆಟ್‌ ನೀಡಿದೆ ಎಂದು ಕಣ್ಣೀರಿಟ್ಟರು.

ಈ ವೇಳೆ ಪರಿಷತ್‌ ಸದಸ್ಯ ರಮೇಶ್ ಕುಮಾರ್, ಮಾಜಿ ಪರಿಷತ್‌ ಸದಸ್ಯ ಶರವಣ್‌, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News