ಬಿಬಿಎಂಪಿ 1500 ಕೋಟಿ ರೂ. ನಕಲಿ ಬಿಲ್ ಹಗರಣ: ಶ್ವೇತಪತ್ರಕ್ಕೆ ಸಿಪಿಎಂ ಆಗ್ರಹ

Update: 2020-10-17 06:17 GMT

ಬೆಂಗಳೂರು, ಅ.17: 2008ರಿಂದ 2011 ಕಾಲಾವಧಿಯಲ್ಲಿ ರಾಜರಾಜೇಶ್ವರಿ ನಗರ, ಗಾಂಧಿ ನಗರ ಮತ್ತು ಮಲ್ಲೇಶ್ವರಂನ 3 ವಿಧಾನ ಸಭಾ ಕ್ಷೇತ್ರಗಳ ವ್ಯಪ್ತಿಯಲ್ಲಿ ನಡೆದಿರುವ ಬಿಬಿಎಂಪಿ ನಕಲಿ ಬಿಲ್ ಗಳ 1,500 ಕೋಟಿ ರೂ. ಹಗರಣ ಕುರಿತು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ತನಿಖಾ ಆಯೋಗ ನೀಡಿರುವ ವರದಿ ಆಧರಿಸಿ ರಾಜ್ಯ ಸರಕಾರವು ಕೈಗೊಂಡಿರುವ ಕ್ರಮಗಳ ಕುರಿತು ಕೂಡಲೆ ಶ್ವೇತಪತ್ರ ಹೊರಡಿಸಬೇಕೆಂದು ಸಿಪಿಎಂ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಒತ್ತಾಯಿಸಿದೆ.

 ಮೂರು ಕ್ಷೇತ್ರಗಳ ವ್ಯಾಪ್ತಿಯಲ್ಲಿ 6,000 ಕಡತಗಳನ್ನು ಪರಿಶೀಲಿಸಿ 1,500 ಕೋಟಿ ರೂ.ಗಳ ಅಕ್ರಮ ನಡೆದಿರುವುದನ್ನು ದೃಢಪಡಿಸಿ ಸಿವಿಲ್, ಕ್ರಿಮಿನಲ್ ಮತ್ತು ನಷ್ಟ ವಸೂಲಿಯ ಮೂರು ವಿಧದ ಕ್ರಮಗಳಿಗೆ ಆಯೋಗವು ಶಿಫಾರಸು ಮಾಡಿತ್ತು. 2018ರಲ್ಲಿ 600 ಪುಟಗಳ 2 ಸಂಪುಟದ ವರದಿಯನ್ನು ಅಂದಿನ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ದಿ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ರವರಿಗೆ ಸಲ್ಲಿಸಿತ್ತು. ಅದಕ್ಕೂ ಮುನ್ನ ಐಎಎಸ್ ಅಧಿಕಾರಿ ಡಾ.ರಾಜೇಂದ್ರ ಕುಮಾರ್  ಕಟಾರಿಯ ಸಿವಿಲ್ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಕುರಿತು ವರದಿ ನೀಡಿದ್ದರು. ಅಂದು ಕಾಂಗ್ರೆಸ್ ಶಾಸಕರಾಗಿದ್ದ ಇಂದಿನ ಬಿಜೆಪಿಯ ಆರ್.ಆರ್.ನಗರ ಕ್ಷೇತ್ರದ ಅಭ್ಯರ್ಥಿ ಮುನಿರತ್ನರ ಕಚೇರಿಯಲ್ಲಿ ಹಲವು ಬಿಬಿಎಂಪಿ ಕಡತಗಳು ಮುಂತಾದವು ಸಿಕ್ಕಿದ್ದು, ಆ ವೇಳೆ ಬಿಜೆಪಿಯೆ ವಿರೋಧ ಪಕ್ಷವಾಗಿ ಅದರ ವಿರುದ್ದ ಹೋರಾಟ ನಡೆಸಿ ತನಿಖೆಗೆ ಒತ್ತಾಯಿಸಿತ್ತು. ಪರಿಣಾಮವಾಗಿ ತನಿಖೆಗೆ ಆದೇಶಿಸಲಾಗಿತ್ತು ಎಂದು ಸಿಪಿಎಂ ಪ್ರಕಟನೆಯಲ್ಲಿ ತಿಳಿಸಿದೆ.

ಇದು ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್,  ಮಾಜಿ ಸಚಿವರಾದ ಕಾಂಗ್ರೆಸ್ ಮುಖಂಡ  ದಿನೇಶ್ ಗುಂಡೂ ರಾವ್ ಹಾಗು ಹಾಲಿ ಆರ್.ಆರ್.ನಗರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ ಪ್ರತಿನಿಧಿಸಿದ್ದ ಕ್ಷೇತ್ರಗಳಿಗೆ ಸಂಬಂಧಿಸಿದ ನಕಲಿ ಬಿಲ್  ಹಗರಣವಾಗಿರುವ ಕಾರಣ  ವರದಿ ಆಧರಿಸಿ ಕೈಗೊಂಡಿರುವ ಕ್ರಮಗಳ ಕುರಿತು ರಾಜ್ಯ ಸರಕಾರವು ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು

ಸಿಪಿಎಂ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ. ಎನ್. ಉಮೇಶ್, ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎನ್. ಪ್ರತಾಪ್ ಸಿಂಹ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News