ಮಲ್ಲೇಶ್ವರಂ ಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳೂ ಡಿಜಿಟಲ್: ಅಶ್ವತ್ಥ ನಾರಾಯಣ

Update: 2020-10-17 15:47 GMT

ಬೆಂಗಳೂರು, ಅ.17: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಎಲ್ಲ ಸರಕಾರಿ ಶಾಲೆಗಳನ್ನು ಡಿಜಿಟಲ್ ಹಾಗೂ ಸ್ಮಾರ್ಟ್ ಶಾಲೆಗಳಾಗಿ ಪರಿವರ್ತಿಸುವ ಹಿನ್ನೆಲೆಯಲ್ಲಿ ಪ್ರೌಢಶಾಲೆಯ ಮಕ್ಕಳಿಗೆ ಒಂದು ಸಾವಿರ ಟ್ಯಾಬ್ ಹಾಗೂ ಪ್ರಾಥಮಿಕ ಶಾಲೆಯ ಐವರು ಮಕ್ಕಳಿಗೆ ಒಂದರಂತೆ ಲ್ಯಾಪ್‍ಟಾಪ್ ನೀಡಲಾಗುವುದೆಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಶನಿವಾರ ಕ್ಷೇತ್ರದ 21ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 21ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಉಳಿದ ಟ್ಯಾಬ್‍ಗಳಿಗೆ ಪಠ್ಯಗಳನ್ನು ಸೇರ್ಪಡೆಗೊಳಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ತಿಂಗಳೊಳಗೆ ಈ ಕೆಲಸ ಮುಗಿಯಲಿದ್ದು, ತದನಂತರ ಮಕ್ಕಳಿಗೆ ವಿತರಿಸಲಾಗುವುದೆಂದರು.

ಮತ್ತಿಕೆರೆ ಶಾಲೆಯಲ್ಲಿ ಜಾರಿ: ಶಾಲೆಗಳನ್ನು ಸ್ಮಾರ್ಟ್ ಮತ್ತು ಡಿಜಿಟಲ್ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ಮಲ್ಲೇಶ್ವರಂ ಕ್ಷೇತ್ರದ ಮತ್ತಿಕೆರೆ ಶಾಲೆಯಲ್ಲಿ ಸ್ಮಾರ್ಟ್ ಕಲಿಕೆ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಇದನ್ನು ಹಂತ ಹಂತವಾಗಿ ಎಲ್ಲ ಶಾಲೆಗಳಿಗೂ ವಿಸ್ತರಿಸಲಾಗುವುದೆಂದು ಅವರು ಹೇಳಿದ್ದಾರೆ.

ಶಾಲೆಗಳಲ್ಲಿ ಡಿಜಿಟಲ್ ಮತ್ತು ಸ್ಮಾರ್ಟ್ ಶಿಕ್ಷಣಕ್ಕೆ ಪೂರಕವಾಗುವಂತೆ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಇದರ ಜತೆಗೆ ಶಾಲೆಗಳಲ್ಲಿ ಕಟ್ಟಡ, ನೀರು ಶೌಚಾಲಯ ಸೇರಿದಂತೆ ಇನ್ನಿತರೆ ಮೂಲಭೂತ ಸಮಸ್ಯೆಗಳಿದ್ದರೆ ಅವುಗಳನ್ನು ಆದ್ಯತೆ ಮೇರೆಗೆ ಸರಿಪಡಿಸಲಾಗುವುದೆಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಇಲಾಖಾ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News