ಪ್ರಧಾನಿ ಮೋದಿ ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನಕ್ಕೆ ಚಾಲನೆ ನೀಡಿದ್ದ ಗ್ರಾಮದಲ್ಲಿಯೇ ಒಬ್ಬರೂ ಫಲಾನುಭವಿಗಳಿಲ್ಲ!

Update: 2020-10-18 13:39 GMT

ಪಾಟ್ನಾ,ಅ.18: ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಹೊಟ್ಟೆಗಿಲ್ಲದೆ ತವರುರಾಜ್ಯ ಬಿಹಾರಕ್ಕೆ ಮರಳಿದ್ದ ವಲಸೆ ಕಾರ್ಮಿಕರ ಸ್ಥಿತಿ ಇಂದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ‘ಬಿಹಾರದಲ್ಲಿಯೇ ಇರಿ,ನಾವು ಪ್ರತಿಯೊಬ್ಬರಿಗೂ ಇಲ್ಲಿಯೇ ಉದ್ಯೋಗ ನೀಡುತ್ತೇವೆ ’ಎಂದು ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ ಅವರು ಮೇ 23ರಂದು ವೀಡಿಯೊ ಸಂದೇಶದಲ್ಲಿ ವಲಸೆ ಕಾರ್ಮಿಕರಿಗೆ ಭರವಸೆ ನೀಡಿದ್ದರು. ಇದು ಚುನಾವಣಾ ವರ್ಷವಾಗಿರುವುದರಿಂದ ವಲಸೆ ಕಾರ್ಮಿಕರನ್ನು ರಾಜ್ಯದಲ್ಲಿಯೇ ಉಳಿಸಿಕೊಳ್ಳಲು ನಿತೀಶ್ ಬಯಸಿದ್ದಾರೆ ಮತ್ತು ಅವರ ಏಳಿಗೆಗಾಗಿ ದೃಢವಾದ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದೇ ಆಗ ಭಾವಿಸಲಾಗಿತ್ತು. ಆದರೆ ಅವರ ಭರವಸೆ ಘೋಷಣೆಯಾಗಿಯೇ ಉಳಿದುಕೊಂಡಾಗ ಹತಾಶ ಕಾರ್ಮಿಕರು ಲಾಕ್‌ಡೌನ್ ಸಡಿಲುಗೊಳ್ಳುತ್ತಿದ್ದಂತೆ ಕೆಲಸ ಹುಡುಕಿಕೊಂಡು ಮತ್ತೆ ಅನ್ಯರಾಜ್ಯಗಳತ್ತ ಮುಖ ಮಾಡಿದ್ದರು. ಕಳೆದ ಜೂನ್‌ನಲ್ಲಿ ರಾಜ್ಯದಲ್ಲಿ ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನ (ಜಿಕೆಆರ್‌ಎ)ಕ್ಕೆ ಚಾಲನೆ ನೀಡಲಾಗಿದ್ದರೂ ಸಾವಿರಾರು ವಲಸೆ ಕಾರ್ಮಿಕರಿಗೆ ಈಗಲೂ ಉದ್ಯೋಗಗಳು ಲಭಿಸಿಲ್ಲ. ನರೇಗಾ ಯೋಜನೆಯಡಿ ದುಡಿದಿದ್ದ ಸಾವಿರಾರು ಕಾರ್ಮಿಕರಿಗೆ ಇನ್ನೂ ಕೂಲಿಯೇ ದೊರಕಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಜೂ.20ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಬಿಹಾರದ ಖಗರಿಯಾ ಜಿಲ್ಲೆಯ ತೇಲಿಹಾರ್ ಗ್ರಾಮದಿಂದ ಜಿಕೆಆರ್‌ಎಗೆ ಚಾಲನೆ ನೀಡಿದ್ದರು. ‘ಈ ಯೋಜನೆಯಿಂದ ಉದ್ಯೋಗಗಳು ಎಷ್ಟು ಸೃಷ್ಟಿಯಾಗಲಿವೆ ಎಂದರೆ ಕಾರ್ಮಿಕರ ಕೊರತೆಯಾಗಲಿದೆ’ ಎಂದು ಹೇಳುವ ಮೂಲಕ ಅವರು ವಲಸೆ ಕಾರ್ಮಿಕರಲ್ಲಿ ಭರವಸೆಯ ಬೆಳಕು ಮೂಡಿಸಿದ್ದರು. ವಿಪರ್ಯಾಸವೆಂದರೆ ಅವರು ಯೋಜನೆಗೆ ಚಾಲನೆ ನೀಡಿ ಸರಿಸುಮಾರು ನಾಲ್ಕು ತಿಂಗಳುಗಳೇ ಕಳೆದಿವೆ ಆದರೆ ತೇಲಿಹಾರ್ ಗ್ರಾಮದಲ್ಲಿ ಇಂದಿಗೂ ಈ ಯೋಜನೆಯ ಒಬ್ಬನೇ ಒಬ್ಬ ಫಲಾನುಭವಿಯಿಲ್ಲ!

7,000 ಕೋ.ರೂ.ಇನ್ನೂ ಬಳಕೆಯಾಗಿಲ್ಲ

ಕೊರೋನ ವೈರಸ್ ಬಿಕ್ಕಟ್ಟು ಮತ್ತು ಲಾಕ್‌ಡೌನ್ ನಡುವೆ ತಮ್ಮ ಗ್ರಾಮಗಳಿಗೆ ಮರಳಿದ್ದ ಬಿಹಾರ, ಉ.ಪ್ರದೇಶ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್ ಮತ್ತು ರಾಜಸ್ಥಾನಗಳ 23.6 ಲ.ವಲಸೆ ಕಾರ್ಮಿಕರಿಗೆ ಉದ್ಯೋಗಗಳನ್ನು ಒದಗಿಸಲು ಕೇಂದ್ರ ಸರಕಾರವು ಜಿಕೆಆರ್‌ಎ ಅನ್ನು ಆರಂಭಿಸಿತ್ತು. ಯೋಜನೆಯಡಿ ಬಿಹಾರಕ್ಕೆ 17,598.8 ಕೋ.ರೂ.ಗಳನ್ನು ನೀಡಲಾಗಿತ್ತು. ಬಿಹಾರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯು ನೀಡಿರುವ ಮಾಹಿತಿಯಂತೆ ಈ ಪೈಕಿ ಅ.13ರವರೆಗೆ ಕೇವಲ 10,006.1 ಕೋ.ರೂ.ಗಳನ್ನು ವೆಚ್ಚ ಮಾಡಲು ಸಾಧ್ಯವಾಗಿದೆ. ಜಿಕೆಆರ್‌ಎ ಅ.22ರಂದು ಅಂತ್ಯಗೊಳ್ಳಲಿದೆ.

ಬಿಹಾರವು ಗರಿಷ್ಠ ಸಂಖ್ಯೆಯ ವಲಸೆ ಕಾರ್ಮಿಕರು ವಾಪಸಾಗಿದ್ದ ರಾಜ್ಯವಾಗಿದ್ದರಿಂದ ಮತ್ತು ಈ ವರ್ಷವೇ ವಿಧಾನಸಭಾ ಚುನಾವಣೆಗಳು ನಡೆಯಲಿರುವುದರಿಂದ ಯೋಜನೆಗಾಗಿ ಗರಿಷ್ಠ ಜಿಲ್ಲೆಗಳನ್ನು ರಾಜ್ಯದಿಂದಲೇ ಆಯ್ಕೆ ಮಾಡಲಾಗಿತ್ತು.

ನರೇಗಾ ಯೋಜನೆಯಡಿ ಕಾರ್ಮಿಕರಿಗೆ 125 ದಿನಗಳ ಖಚಿತ ಅವಧಿಗೆ ಕೆಲಸಗಳನ್ನು ನೀಡಲಾಗಿತ್ತು ಮತ್ತು ಯೋಜನೆಯಡಿ ವ್ಯಯಿಸಿರುವ ಮೊತ್ತದ ಬಗ್ಗೆ ತಮಗೆ ತೃಪ್ತಿಯಿದೆ. ಕೇಂದ್ರದಿಂದ ಹಣ ಬಿಡುಗಡೆಯಲ್ಲಿ ವಿಳಂಬ,16 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಮತ್ತು ಮಳೆಯಿಂದಾಗಿ ಕಾಮಗಾರಿಗಳು ಹಲವಾರು ದಿನಗಳ ಕಾಲ ಸ್ಥಗಿತಗೊಂಡಿದ್ದರಿಂದ ಹೆಚ್ಚು ಹಣವನ್ನು ವ್ಯಯಿಸಲು ಸಾಧ್ಯವಾಗಿಲ್ಲ ಎನ್ನುವುದು ಅಧಿಕಾರಿಗಳ ಹೇಳಿಕೆ.
ಇದೇ ರೀತಿ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ (ಪಿಎಂಜಿಎಸ್‌ವೈ)ಗಾಗಿ ಬಿಹಾರಕ್ಕೆ 2,460.88 ಕೋ.ರೂ.ಗಳನ್ನು ಹಂಚಿಕೆ ಮಾಡಲಾಗಿದ್ದರೂ ಈವರೆಗೆ ಕೇವಲ 540.7 ಕೋ.ರೂ.ಗಳನ್ನು ವ್ಯಯಿಸಲಾಗಿದೆ.
ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ)ಯದ್ದೂ ಇದೇ ಕಥೆ. 6,180.44 ಕೋ.ರೂ.ಗಳು ಹಂಚಿಕೆಯಾಗಿದ್ದರೂ ಅ.13ರವರೆಗೆ ಬಿಹಾರ ಸರಕಾರವು ವ್ಯಯಿಸಿದ್ದು ಕೇವಲ 2886.77 ಕೋ.ರೂ.ಗಳನ್ನು ಮಾತ್ರ. ಕೇಂದ್ರದಿಂದ ಹಣ ಬಿಡುಗಡೆ ವಿಳಂಬಗೊಂಡಿದ್ದರಿಂದ ಕಾಮಗಾರಿಗಳು ಅರ್ಧಕ್ಕೇ ಸ್ಥಗಿತಗೊಂಡಿವೆ ಎನ್ನುವುದು ಅಧಿಕಾರಿಗಳ ಸಮಜಾಯಿಷಿ.

ನೀವು ಹೇಳುವಂತೆ ರಾಜ್ಯದಲ್ಲಿ ಉದ್ಯೋಗಾವಕಾಶಗಳಿದ್ದರೂ ಕಾರ್ಮಿಕರೇಕೆ ಹೊರರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂಬ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಮಾರ ಚೌಧರಿ ಉತ್ತರಿಸಿದ್ದು ಹೀಗೆ; ನರೇಗಾ ಯೋಜನೆಯಡಿ ದಿನಕ್ಕೆ 193 ರೂ. ಕೂಲಿಯನ್ನು ನೀಡಲಾಗುತ್ತದೆ ಮತ್ತು ಇತರ ನಗರಗಳಲ್ಲಿ ಕಾರ್ಮಿಕರು ದಿನವೊಂದಕ್ಕೆ 400-500 ರೂ.ಗಳನ್ನು ಗಳಿಸುತ್ತಾರೆ. ಇದೇ ಕಾರಣದಿಂದ ಅವರು ಹೊರರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಈ ವಿಷಯದಲ್ಲಿ ನಾವೇನೂ ಮಾಡುವಂತಿಲ್ಲ.

ಪ್ರಧಾನಿ ಯೋಜನೆಗೆ ಚಾಲನೆ ನೀಡಿದ್ದ ಗ್ರಾಮದಲ್ಲಿ ಕಾರ್ಮಿಕರನ್ನು ಹೇಗೆ ಆಯ್ಕೆ ಮಾಡಬೇಕು ಮತ್ತು ಅಭಿಯಾನದಡಿ ಕೆಲಸಕ್ಕಾಗಿ ಕಾರ್ಮಿಕರು ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟ ನೀತಿಯನ್ನು ಜಿಕೆಆರ್‌ಎ ಹೊಂದಿಲ್ಲ. ಮೋದಿ ಯೋಜನೆಗೆ ಚಾಲನೆ ನೀಡಿದ್ದ ತೇಲಿಹಾರ್ ಗ್ರಾಮದಲ್ಲಿ ಒಬ್ಬನೇ ಒಬ್ಬ ಕಾರ್ಮಿಕನಿಗೆ ಜಿಕೆಆರ್‌ಎದ ಲಾಭ ದೊರಕಿಲ್ಲ ಎನ್ನುವುದು ಅಭಿಯಾನದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಅಭಿಯಾನದ ಉದ್ಘಾಟನೆ ಸಂದರ್ಭದಲ್ಲಿ ಕೆಲವರಿಗೆ ಕೆಲಸಗಳು ದೊರಕಿದ್ದವಾದರೂ ಒಂದು ತಿಂಗಳ ಬಳಿಕ ಅವರೂ ಹೊರರಾಜ್ಯಗಳಿಗೆ ವಲಸೆ ಹೋಗಿದ್ದಾರೆ.

ನರೇಗಾ: ಕೆಲಸವೂ ಇಲ್ಲ, ಮಾಡಿದ್ದ ಕೆಲಸಕ್ಕೆ ಕೂಲಿಯೂ ಇಲ್ಲ

ಆಂಧ್ರ ಪ್ರದೇಶದಲ್ಲಿ ದುಡಿಯುತ್ತಿದ್ದ ಓಂ ಪ್ರಕಾಶ ರಾಮ ದಿನಕ್ಕೆ ಐದಾರು ನೂರು ರೂ.ಗಳನ್ನು ಗಳಿಸುತ್ತಿದ್ದ. ಲಾಕ್‌ಡೌನ್‌ನಿಂದಾಗಿ ತನ್ನ ಹುಟ್ಟೂರು ವೈಶಾಲಿ ಜಿಲ್ಲೆಯ ಬಾಲಿಗಾಂವ್‌ಗೆ ಮರಳಿದ್ದ ಆತ ಐದು ತಿಂಗಳ ಬಳಿಕವೂ ಯಾವುದೇ ಕೆಲಸ ದೊರೆಯದೆ ಹತಾಶನಾಗಿದ್ದಾನೆ. ನರೇಗಾ ಅಥವಾ ಜಿಕೆಆರ್‌ಎ ಅಡಿಯೂ ಆತನಿಗೆ ಕೆಲಸ ಲಭಿಸಿಲ್ಲ. ವಿವಾಹಿತನಾಗಿರುವ ಓಂ ಪ್ರಕಾಶನ ತಂದೆಗೆ ಅನಾರೋಗ್ಯದಿಂದಾಗಿ ದುಡಿಯಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಆತ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದಾನೆ ಮತ್ತು ಸಂಪೂರ್ಣ ನಿರುದ್ಯೋಗಿಯಾಗಿದ್ದಾನೆ.

ಚೆನ್ನೈನಲ್ಲಿ ಹಾರ್ನ್ ತಯಾರಿಕೆ ಕಂಪನಿಯಲ್ಲಿ ದಿನಕ್ಕೆ 450 ರೂ.ವೇತನಕ್ಕೆ ದುಡಿಯುತ್ತಿದ್ದ ಸುನಿಲ ಮಾಂಝಿ ಲಾಕ್‌ಡೌನ್ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತವರು ಜಿಲ್ಲೆಯಲ್ಲಿಯ ತನ್ನೂರು ಅಕ್ಬರ್‌ಪುರ ಗ್ರಾಮಕ್ಕೆ ಮರಳಿದ್ದ. 10 ದಿನಗಳನ್ನು ಕ್ವಾರಂಟೈನ್‌ನಲ್ಲಿ ಕಳೆದ ಬಳಿಕ ನರೇಗಾದಡಿ ಕೆಲಸ ದೊರಕಿತ್ತು. ಆತ ಕೆಲಸ ಆರಂಭಿಸಿ ನಾಲ್ಕು ತಿಂಗಳುಗಳು ಕಳೆದಿದ್ದರೂ ಈವರೆಗೆ ಆತನಿಗೆ ಕೂಲಿ ಪಾವತಿಯಾಗಿಲ್ಲ.
ಇದು ಕೇವಲ ಓಂ ಪ್ರಕಾಶ ಮತ್ತು ಮಾಂಜಿಯ ಕಥೆಯಲ್ಲ, ಬಿಹಾರದ ಪ್ರತಿಯೊಂದು ಗ್ರಾಮದಲ್ಲಿಯೂ ನೂರಾರು ಜನರದ್ದು ಇದೇ ಗೋಳಿನ ಕಥೆ. ಅಧಿಕಾರಿಗಳಿಗೆ ಲಿಖಿತ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇಂತಹ ಹಲವಾರು ಬಡಪಾಯಿಗಳು ಮೋದಿ ಮತ್ತು ನಿತೀಶ್ ಅವರ ವಿರುದ್ಧ ಆಕ್ರೋಶಗೊಂಡಿದ್ದಾರೆ. ‘ಈ ಸರಕಾರ ಬದಲಾಗಬೇಕು ಎಂದು ನಾವು ಬಯಸಿದ್ದೇವೆ. ಉದ್ಯೋಗಗಳನ್ನು ಒದಗಿಸಲಾಗದ ಈ ಸರಕಾರವನ್ನಿಟ್ಟುಕೊಂಡು ಏನು ಮಾಡಲು ಸಾಧ್ಯ’ ಎನ್ನುವುದು ಅವರ ಪ್ರಶ್ನೆ.

Writer - ಉಮೇಶ್ ಕುಮಾರ್ ರೇ - thewire.in

contributor

Editor - ಉಮೇಶ್ ಕುಮಾರ್ ರೇ - thewire.in

contributor

Similar News