ಕನಕಪುರದಿಂದ ಬಂದು ಗೂಂಡಾಗಿರಿ ನಡೆಸುವವರ ಆಟ ನಡೆಯುವುದಿಲ್ಲ: ನಳೀನ್‍ ಕುಮಾರ್ ಕಟೀಲು

Update: 2020-10-18 16:53 GMT

ಬೆಂಗಳೂರು, ಅ. 18: ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ. ಎಲ್ಲಿಂದಲೋ ಇಲ್ಲಿಗೆ ಬಂದವರ ಗೂಂಡಾಗಿರಿ ನಡೆಯುವುದಿಲ್ಲ, ಜನ ಅಭಿವೃದ್ದಿಯ ಪರವಾಗಿರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ ಕುಮಾರ್ ಕಟೀಲು ಹೇಳಿದ್ದಾರೆ.

ರವಿವಾರ ಬಿಜೆಪಿ ಕಚೇರಿಯಲ್ಲಿ ಆರ್‍ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಮಾಜಿ ನಗರಸಭಾ ಸದಸ್ಯರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ಸಾಧನೆಗಳು ಹಾಗೂ ಜನಪರ ಕಾರ್ಯಕ್ರಮಗಳು, ರಾಜರಾಜೇಶ್ವರಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳು ನಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಾಧನಗಳಾಗಿವೆ ಎಂದು ತಿಳಿಸಿದರು.

ಪ್ರಧಾನಿ ಮೋದಿಯ ಅಭಿವೃದ್ಧಿ ಕೆಲಸ, ಯಡಿಯೂರಪ್ಪ ನಾಯಕತ್ವ, ಕೆಲಸಗಳು ಹಾಗೂ ಬಿಜೆಪಿ ಸಿದ್ದಾಂತವನ್ನು ಒಪ್ಪಿ ಹಲವು ಕಾಂಗ್ರೆಸ್ ನಾಯಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹಾಲಿಗೆ ಸಕ್ಕರೆ ಸೇರಿದರೆ ಸಕ್ಕರೆ ಕಣ್ಣಿಗೆ ಕಾಣುವುದಿಲ್ಲ. ಆದರೆ, ಅದರ ಸಿಹಿ ನಮಗೆ ತಿಳಿಯುತ್ತದೆ. ಅದೇ ಮಾದರಿಯಲ್ಲಿ ಇಂದು ಬಿಜೆಪಿ ಸೇರಿರುವವರು ಸಕ್ಕರೆ ಎಂದುಕೊಳ್ಳುತ್ತೇನೆ ಎಂದರು.

ರಾಜರಾಜೇಶ್ವರಿ ನಗರದ ಮತದಾರರರು ಅಭಿವೃದ್ಧಿ ಪರವಿರುವವರ ಕಡೆಗೆ ಇದ್ದಾರೆ. ಕನಕಪುರದಿಂದ ಬಂದು ಇಲ್ಲಿ ಗೂಂಡಾಗಿರಿ ನಡೆಸುವವರ ಆಟ ನಡೆಯುವುದಿಲ್ಲ. ಕಾಂಗ್ರೆಸ್‍ನಿಂದ ಇಂದು ಬಿಜೆಪಿಗೆ ಸೇರ್ಪಡೆಯಾದವರು ಒಂದೊಂದು ಡೈನಾಮೆಂಟ್ ಬಂಡೆಯನ್ನು ಪುಡಿ ಪುಡಿ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಆರ್.ಅಶೋಕ್ ಹಾಗೂ ಅರವಿಂದ ಲಿಂಬಾವಳಿ ಇಬ್ಬರೂ ನಮ್ಮ ಪಕ್ಷದ ಜೋಡೆತ್ತುಗಳಿದ್ದಂತೆ. ಅವರ ನೇತೃತ್ವದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಸಿದ್ದರಾಮಯ್ಯ ಕಾಲದ ಅಧಿಕಾರವನ್ನು ಜನ ನೋಡಿದ್ದಾರೆ. ಅವರು ಜಾತಿ, ಧರ್ಮದ ರಾಜಕೀಯ ಮಾಡಿದ್ದರು. ಜನ ಜಾತಿ, ಧರ್ಮ ನೋಡಲ್ಲ. ಅಭಿವೃದ್ಧಿಯನ್ನು ನೋಡಿ ಮತ ಹಾಕುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News