ಉತ್ತರಪ್ರದೇಶ: ಜೈಲಿನಲ್ಲಿರುವ ಶಾಸಕನ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ ಮಹಿಳೆ

Update: 2020-10-19 06:11 GMT

ಲಕ್ನೊ: ಪೂರ್ವ ಉತ್ತರಪ್ರದೇಶದ ಭದೋಹಿ ಜಿಲ್ಲೆಯ ಗೋಪಿಗಂಜ್ ಪೊಲೀಸ್ ಠಾಣೆಯಲ್ಲಿ ಜೈಲುಪಾಲಾಗಿರುವ ಜ್ಞಾನಪುರ-ಭದೋಹಿ ಶಾಸಕ ವಿಜಯ್ ಮಿಶ್ರಾ, ಅವರ ಮಗ ಹಾಗೂ ಇನ್ನೊಬ್ಬ ಸಂಬಂಧಿಯ ವಿರುದ್ಧ ಮೂವತ್ತರ ಹರೆಯದ ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2014ರಲ್ಲಿ ಗನ್ ತೋರಿಸಿ ಮಿಶ್ರಾ ನನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸೆಗಿದ್ದ. ಮಿಶ್ರಾ ಅವರ ಪುತ್ರ ವಿಷ್ಣು ಮಿಶ್ರಾ ಹಾಗೂ ಆತನ ಸಂಬಂಧಿ ವಿಕಾಸ್ ಮಿಶ್ರಾ ಕೂಡ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

ವಿಜಯ ಮಿಶ್ರಾ, ಆತನ ಮಗ ವಿಷ್ಣು ಮಿಶ್ರಾ ಹಾಗೂ ಸಂಬಂಧಿ ವಿಕಾಸ್ ಮಿಶ್ರಾ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ)ಸೆಕ್ಷನ್‌ಗಳಾದ 376 ಡಿ(ಸಾಮೂಹಿಕ ಅತ್ಯಾಚಾರ), 342(ತಪ್ಪಾದ ಬಂಧನ) ಹಾಗೂ 506(ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗೋಪಿಚಂದ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೃಷ್ಣಾನಂದ ರಾಯ್ ಹೇಳಿದ್ದಾರೆ.

ಆಪಾದಿತ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

 2017ರ ವಿಧಾನಸಭಾ ಚುನಾವಣೆಯಲ್ಲಿ ಮಿಶ್ರಾ ಅವರು ನಿರ್ಬಲ್ ಇಂಡಿಯನ್ ಶೋಶಿತ್ ಹಮಾರ ಆಮ್ ದಳ್(ನಿಶಾದ್)ಪಕ್ಷದ ಶಾಸಕನಾಗಿ ಚುನಾಯಿತನಾಗಿದ್ದರು.

2014ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಭದೋಹಿಯಲ್ಲಿ ಪ್ರಚಾರಕ್ಕಾಗಿ ನನ್ನನ್ನು ಕರೆಸಿಕೊಳ್ಳಲಾಗಿತ್ತು. ಅತ್ಯಾಚಾರ ವಿರೋಧಿಸಲು ಯತ್ನಿಸಿದಾಗ ಆರೋಪಿಗಳು ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಶಾಸಕರ ಭಯದಿಂದ ಮಹಿಳೆ ಮುಂಬೈಗೆ ತೆರಳಿದ್ದರು. ಶಾಸಕ ಮತ್ತೊಂದು ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆಂದು ತಿಳಿದು ಪ್ರಕರಣ ದಾಖಲಿಸಲು ರಾಜ್ಯಕ್ಕೆ ಸಂತ್ರಸ್ತೆ ಬಂದಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು. ಆಸ್ತಿ ಕಬಳಿಕೆ ಪ್ರಕರಣದಲ್ಲಿ ವಿಜಯ ಮಿಶ್ರಾ ಅವರನ್ನು ಆಗಸ್ಟ್‌ನಲ್ಲಿ ಬಂಧಿಸಲಾಗಿದ್ದು ಪ್ರಸ್ತುತ ಆಗ್ರಾ ಜೈಲಿನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News