ಲಡಾಖ್: ಚೀನಾ ಸೈನಿಕನ ಸೆರೆ ಹಿಡಿದ ಭಾರತ ಸೇನೆ

Update: 2020-10-19 18:08 GMT

ಹೊಸದಿಲ್ಲಿ, ಅ.19: ಲಡಾಖ್ ಗಡಿಭಾಗದ ಬಳಿ ಚೀನಾದ ಸೈನಿಕನನ್ನು ಭದ್ರತಾ ಪಡೆಗಳು ಸೆರೆ ಹಿಡಿದಿರುವುದಾಗಿ ಸುದ್ದಿಸಂಸ್ಥೆ ಎಎನ್‌ಐ ಸೋಮವಾರ ವರದಿ ಮಾಡಿದೆ.

ಚುಮರ್-ಡೆಮ್‌ಚೋಕ್ ಪ್ರದೇಶದಲ್ಲಿ ಚೀನೀ ಸೈನಿಕನನ್ನು ಸೆರೆ ಹಿಡಿಯಲಾಗಿದೆ. ಆತ ಅಕಸ್ಮಾತ್ ಆಗಿ ಭಾರತದ ಭೂಪ್ರದೇಶ ಪ್ರವೇಶಿಸಿರುವ ಸಾಧ್ಯತೆಯಿದೆ. ಶಿಷ್ಟಾಚಾರದಂತೆ ಸೂಕ್ತ ಕಾರ್ಯವಿಧಾನದ ಮೂಲಕ ಸೈನಿಕನನ್ನು ಚೀನಾದ ಸೇನೆಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳು ಹೇಳಿವೆ.

ಪೂರ್ವ ಲಡಾಖ್‌ನ ಗಡಿಭಾಗದಲ್ಲಿ ಅಕ್ಟೋಬರ್ 19ರಂದು ದಾರಿ ತಪ್ಪಿ ಭಾರತದ ಭೂಪ್ರದೇಶಕ್ಕೆ ಬಂದ ಚೀನಾದ ಸೈನಿಕನನ್ನು ವಶಕ್ಕೆ ಪಡೆದಿದ್ದು ಈತನನ್ನು ಕಾರ್ಪರಲ್ ವಾಂಗ್ ಯಾ ಲೊಂಗ್ ಎಂದು ಗುರುತಿಸಲಾಗಿದೆ. ಸೆರೆಸಿಕ್ಕ ಸಂದರ್ಭ ಈತನ ಬಳಿ ನಾಗರಿಕ ಮತ್ತು ಸೇನಾ ದಾಖಲೆಗಳಿದ್ದವು . ಸೈನಿಕ ಕಾಣೆಯಾಗಿರುವ ಬಗ್ಗೆ ಚೀನಾದ ಸೇನೆಯೂ ಮಾಹಿತಿ ನೀಡಿದೆ. ಸ್ಥಾಪಿತ ಶಿಷ್ಟಾಚಾರದಂತೆ ಆತನನ್ನು ಚುಷುಲ್-ಮೊಲ್ಡೊ ಮೀಟಿಂಗ್ ಪಾಯಿಂಟ್‌ನಲ್ಲಿ ಚೀನಾ ಸೇನೆಗೆ ಹಸ್ತಾಂತರಿಸಲಾಗುವುದು . ಯೋಧನಿಗೆ ಆಮ್ಲಜನಕ ಸಹಿತ ವೈದ್ಯಕೀಯ ನೆರವು, ಆಹಾರ ಮತ್ತು ಲಡಾಖ್‌ನಲ್ಲಿ ವಿಪರೀತ ಚಳಿಯ ಹಿನ್ನೆಲೆಯಲ್ಲಿ ಬೆಚ್ಚನೆಯ ಹೊದಿಕೆಗಳನ್ನು ಒದಗಿಸಲಾಗಿದೆ ಎಂದು ಭಾರತೀಯ ಸೇನೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News