ಬಿಹಾರ ಚುನಾವಣೆ : ಪ್ರಥಮ ಹಂತದಲ್ಲಿ ಕಣದಲ್ಲಿರುವ 31% ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ; ವರದಿ

Update: 2020-10-20 15:51 GMT
Photo: twitter.com/adrspeaks

ಪಾಟ್ನ, ಅ.20: ಬಿಹಾರ ವಿಧಾನಸಭೆ ಚುನಾವಣೆಯ ಪ್ರಥಮ ಹಂತದಲ್ಲಿ ಕಣದಲ್ಲಿರುವ 1,064 ಅಭ್ಯರ್ಥಿಗಳಲ್ಲಿ 31% ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದನ್ನು ಸ್ವಯಂ ಘೋಷಿಸಿಕೊಂಡಿದ್ದಾರೆ ಎಂದು ‘ಅಸೋಸಿಯೇಷನ್ ಫಾರ್ ಡೆಮಕ್ರಾಟಿಕ್ ರಿಫಾರ್ಮ್ಸ್’(ಎಡಿಆರ್) ನ ವರದಿ ತಿಳಿಸಿದೆ. ಒಟ್ಟು 328 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದು ಇವರಲ್ಲಿ 244 ಅಭ್ಯರ್ಥಿಗಳು(23%) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದನ್ನು ತಿಳಿಸಿದ್ದಾರೆ. ಗಂಭೀರ ಕ್ರಿಮಿನಲ್ ಪ್ರಕರಣವು ಜಾಮೀನುರಹಿತ ಅಪರಾಧವಾಗಿದ್ದು 5 ವರ್ಷಕ್ಕೂ ಹೆಚ್ಚು ಜೈಲು ಶಿಕ್ಷೆ ವಿಧಿಸಬಹುದಾಗಿದೆ. 375 ಅಭ್ಯರ್ಥಿಗಳು(35%) ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ಇರುವುದನ್ನು ಘೋಷಿಸಿದ್ದರೆ 5 ಅಭ್ಯರ್ಥಿಗಳು ತಮ್ಮಲ್ಲಿರುವ ಆಸ್ತಿ ಶೂನ್ಯ ಎಂದು ಘೋಷಿಸಿದ್ದಾರೆ.

ಪ್ರಥಮ ಹಂತದಲ್ಲಿ ಕಣದಲ್ಲಿರುವ ಆರ್‌ಜೆಡಿಯ 41 ಅಭ್ಯರ್ಥಿಗಳ ಪ್ರಮಾಣಪತ್ರವನ್ನು ಎಡಿಆರ್ ಪರಿಶೀಲಿಸಿದ್ದು ಇದರಲ್ಲಿ 30 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದಿದ್ದರೆ, 22 ಅಭ್ಯರ್ಥಿಗಳು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದಾಗಿ ಘೋಷಿಸಿದ್ದಾರೆ. ಬಿಜೆಪಿಯ 29 ಅಭ್ಯರ್ಥಿಗಳ ಪ್ರಮಾಣಪತ್ರ ಪರಿಶೀಲಿಸಿದ್ದು ಇದರಲ್ಲಿ 21 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೆ 13 ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್‌ನ 21 ಅಭ್ಯರ್ಥಿಗಳ ಪ್ರಮಾಣಪತ್ರವನ್ನು ಪರಿಶೀಲಿಸಿದ್ದು ಇದರಲ್ಲಿ 12 ಅಭ್ಯರ್ಥಿಗಳು, ಜೆಡಿಯುನ 35 ಅಭ್ಯರ್ಥಿಗಳಲ್ಲಿ 15 ಅಭ್ಯರ್ಥಿಗಳು, ಬಿಎಸ್‌ಪಿಯ 26 ಅಭ್ಯರ್ಥಿಗಳಲ್ಲಿ 8 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದನ್ನು ನಮೂದಿಸಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News