ನಿಕೋಲಸ್ ಪೂರನ್ ಅರ್ಧಶತಕ: ಕಿಂಗ್ಸ್ ಪಂಜಾಬ್ ಗೆ ಮಣಿದ ಡೆಲ್ಲಿ ಕ್ಯಾಪಿಟಲ್ಸ್

Update: 2020-10-20 17:37 GMT

ದುಬೈ: ನಿಕೋಲಸ್ ಪೂರನ್ ಬಾರಿಸಿದ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಗಳ ಗೆಲುವು ಸಾಧಿಸಿದೆ.

ಗೆಲುವಿಗೆ 165 ರನ್ ಗುರಿ ಪಡೆದ ಪಂಜಾಬ್ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗುರಿ ತಲುಪಿತು. ಈ ಮೂಲಕ ತಾನಾಡಿದ 10 ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಸಾಧಿಸಿತು.

ಪಂಜಾಬ್ ಪರ ನಿಕೋಲಸ್ ಪೂರನ್ 28 ಎಸೆತಗಳಲ್ಲಿ 53 ರನ್ ಬಾರಿಸಿದರು. ಉಳಿದಂತೆ ಕ್ರಿಸ್ ಗೇಲ್ 13 ಎಸೆತಗಳಲ್ಲಿ 29, ಮ್ಯಾಕ್ಸ್ ವೆಲ್ 32 ರನ್ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಕಾಗಿಸೋ ರಬಾಡ 2, ಅಕ್ಸಾರ್ ಪಟೇಲ್ ಹಾಗೂ ಆರ್. ಅಶ್ವಿನ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.

ಆರಂಭಿಕ ಆಟಗಾರ ಶಿಖರ್‌ ಧವನ್ ಸತತ ಎರಡನೇ ಶತಕ ಬಾರಿಸಿ ಮಿಂಚಿದರು. ಅವರು 61 ಎಸೆತಗಳಲ್ಲಿ 106 ರನ್ ಸಿಡಿಸಿದರು. ಡೆಲ್ಲಿ ತಂಡದ ಉಳಿದ ಆಟಗಾರರು 59 ಎಸೆತಗಳಲ್ಲಿ ಕೇವಲ 58 ರನ್ ಬಾರಿಸಿದರು.

ಪಂಜಾಬ್ ಪರ ಮುಹಮ್ಮದ್ ಶಮಿ 2, ಅಶ್ವಿನ್, ನೀಶಮ್ ಹಾಗೂ ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News