ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಫೋಟೊ ನಗ್ನಗೊಳಿಸುವ ವಿಕೃತ ಮನೋಭಾವ

Update: 2020-10-21 15:44 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದಲ್ಲಿ ಮಹಿಳೆಯರಿಗೆ ಆನ್‍ಲೈನ್ ಕಿರುಕುಳ ನೀಡುವ ವಿಕೃತ ಮನೋಭಾವ ಇದೀಗ ಹೊಸ ಎತ್ತರಕ್ಕೇರಿದ್ದು, ಮಹಿಳೆಯರ ಸಾಮಾನ್ಯ ಫೋಟೊವನ್ನು ನಗ್ನಚಿತ್ರವನ್ನಾಗಿ ಮಾರ್ಪಡಿಸುವ ಸೇವೆಯನ್ನು ಅಪರಿಚಿತ ಸೈಬರ್ ಅಪರಾಧಿಗಳು ಆರಂಭಿಸಿದ್ದಾರೆ ಎಂದು ನಕಲಿ ಫೋಟೊಗಳ ಟ್ರ್ಯಾಕಿಂಗ್ ಮಾಡುವ ಸೈಬರ್ ಸಂಶೋಧನಾ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗಪಡಿಸಿದೆ. 

ವ್ಯಾಪಕವಾಗಿ ಬೆಳೆಯುತ್ತಿರುವ ಈ ದಂಧೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಹಿಳೆಯರ ಭಾವಚಿತ್ರಗಳನ್ನು ಗುರಿ ಮಾಡಿದ್ದು, ಆನ್‍ಲೈನ್ ಲೈಂಗಿಕ ಕಿರುಕುಳದ ಬೆದರಿಕೆಯೊಡ್ಡಿದೆ.

ಡೀಪ್‍ಫೇಕ್ ಎನ್ನುವುದು ಡೀಪ್‍ಲರ್ನಿಂಗ್ ಎಂಬ ಕೃತಕ ಬುದ್ಧಿಮತ್ತೆ ತಂತ್ರವನ್ನು ಬಳಸಿಕೊಂಡು ಮಾರ್ಪಡಿಸಿದ ಮಾಧ್ಯಮವಾಗಿದೆ. ಮೊದಲ ಬಾರಿಗೆ 2017ರಲ್ಲಿ ಗಮನ ಸೆಳೆದ ಈ ತಂತ್ರಜ್ಞಾನ ಕ್ಷಿಪ್ರವಾಗಿ ಬೆಳೆಯುತ್ತಿದೆ. ಇದು ದೇಶಗಳ ಪ್ರಜಾಪ್ರಭುತ್ವ ಮತ್ತು ಕಾನೂನಿನ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಏಕೆಂದರೆ ಪ್ರತಿಸ್ಪರ್ಧಿ ರಾಜಕಾರಣಿಯ ನಕಲಿ ಚಿತ್ರಗಳನ್ನು ತಯಾರಿಸಲು ಈ ಡೀಪ್‍ಫೇಕ್ ತಂತ್ರವನ್ನು ಬಳಸಿಕೊಳ್ಳಬಹುದು ಹಾಗೂ ಆತನನ್ನು ಅಪರಾಧಿ ಎಂದು ಬಿಂಬಿಸಲು ಇಂಥ ಚಿತ್ರಗಳನ್ನು ಬಳಕೆ ಮಾಡಿಕೊಳ್ಳಬಹುದು.

ಸೆಲೆಬ್ರಿಟಿಗಳ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಲು ಕೂಡಾ ಇದನ್ನು ಬಳಸಬಹುದಾಗಿದೆ. ಆದರೆ ಇದೀಗ ನೆದರ್ಲೆಂಡ್ಸ್ ಮೂಲದ ಸೆನ್ಸಿಟಿ ವರದಿ, ಈ ತಂತ್ರದ ವ್ಯಾಪಕ ಬಳಕೆಯನ್ನು ಮೊದಲ ಬಾರಿಗೆ ಬಹಿರಂಗಪಡಿಸಿದೆ. ಯಾರ ಚಿತ್ರಗಳು ಲಭ್ಯ ಇವೆಯೋ ಅಂಥವರನ್ನು ವರ್ಚುವಲ್ ವಿಧಾನದ ಮೂಲಕ ಗುರಿ ಮಾಡಬಹುದಾಗಿದೆ. ಈ ತಂತ್ರದಲ್ಲಿ ಕೇವಲ ಮಹಿಳೆಯರ ಚಿತ್ರಗಳನ್ನಷ್ಟೇ ಮಾರ್ಪಡಿಸಲು ಸಾಧ್ಯ.

"ಈ ಬಾಟ್ ಬಗ್ಗೆ ಮತ್ತು ಸಂಬಂಧಿತ ಚಾನಲ್‍ಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದಾಗ, ಹಲವು ಪ್ರಮುಖ ಅಂಶಗಳು ಪತ್ತೆಯಾಗಿವೆ. 2020ರ ಜುಲೈ ವರೆಗೆ ಲಭ್ಯವಿರುವ ಮಹಿಳೆಯರ ಚಿತ್ರಗಳ ಪೈಕಿ ಸುಮಾರು 1,04,852 ಮಹಿಳೆಯರನ್ನು ಗುರಿ ಮಾಡಲಾಗಿದೆ. ಕಳೆದ ಮೂರು ತಿಂಗಳಲ್ಲಿ ಈ ಸಂಖ್ಯೆ ಶೇಕಡ 198ರಷ್ಟು ಏರಿದೆ" ಎಂದು ವರದಿ ವಿವರಿಸಿದೆ.

ಚಿತ್ರಗಳನ್ನು ಬೆತ್ತಲಾಗಿಸುವ ಎಐ ಬಾಟ್ ಕುರಿತು ಕೇಂದ್ರದಿಂದ ಮಾಹಿತಿ ಕೋರಿದ ಬಾಂಬೆ ಹೈಕೋರ್ಟ್

ಮಹಿಳೆಯರ ಚಿತ್ರಗಳನ್ನು ನಗ್ನರೂಪಕ್ಕೆ ಪರಿವರ್ತಿಸುತ್ತದೆ ಎನ್ನಲಾಗಿರುವ ಕೃತಕ ಬುದ್ಧಿಮತ್ತೆ ಸಾಫ್ಟ್‌ವೇರ್ (ಎಐ ಬಾಟ್) ಕುರಿತ ಇತ್ತೀಚಿನ ವರದಿಗಳ ಬಗ್ಗೆ ಸರಕಾರವು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ಕೇಂದ್ರವನ್ನು ಪ್ರಶ್ನಿಸಿತು.

ಇಂತಹ ಎಐ ಬಾಟ್ ಕುರಿತು ಬುಧವಾರದ ಪತ್ರಿಕೆಗಳಲ್ಲಿನ ವರದಿಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಾಧೀಶ ದೀಪಂಕರ್ ದತ್ತಾ ಮತ್ತು ನ್ಯಾ.ಜಿ.ಎಸ್.ಕುಲಕರ್ಣಿ ಅವರ ಪೀಠವು,ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಮಾಹಿತಿಗಳನ್ನು ಪಡೆದುಕೊಳ್ಳುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರಿಗೆ ಸೂಚಿಸಿತು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತು ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳನ್ನು, ನಿರ್ದಿಷ್ಟವಾಗಿ ಟಿವಿ ಸುದ್ದಿವಾಹಿನಿಗಳನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು.

ವಿದ್ಯುನ್ಮಾನ ಮಾಧ್ಯಮಗಳು ಪ್ರಸಾರ ಮಾಡುವ ವಿಷಯಗಳನ್ನು ನಿಯಂತ್ರಿಸಲು ಶಾಸನಬದ್ಧ ವ್ಯವಸ್ಥೆಯು ಅಗತ್ಯವಿದೆಯೇ ಎನ್ನುವುದರ ಕುರಿತು ವಾದ ಮಂಡಿಸಿದ ಸಿಂಗ್,ಮಾಧ್ಯಮಗಳು ಸ್ವಯಂ ನಿರ್ಬಂಧಗಳನ್ನು ಹೇರಿಕೊಳ್ಳಬೇಕು ಎನ್ನುವುದು ಕೇಂದ್ರದ ಅಭಿಪ್ರಾಯವಾಗಿದೆ,ಆದರೆ ಯಾವುದೇ ಮಾಧ್ಯಮ ಸಂಸ್ಥೆಯು ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕೇಂದ್ರವು ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪೀಠವು ಎಐ ಬಾಟ್ ಕುರಿತು ಪತ್ರಿಕಾ ವರದಿಯನ್ನು ಉಲ್ಲೇಖಿಸಿ,ಈ ವರದಿಯ ಬಗ್ಗೆ ನೀವು ಸಚಿವಾಲಯದಿಂದ ಮಾಹಿತಿಗಳನ್ನು ಪಡೆಯಬಹುದು. ವರದಿಯಲ್ಲಿ ದುರುದ್ದೇಶವಿದೆಯೇ ಎನ್ನುವುದನ್ನು ನೀವು ಪರಿಶೀಲಿಸಬೇಕು ಎಂದು ಸಿಂಗ್ ಅವರಿಗೆ ತಿಳಿಸಿತು.

ತಾನು ಈಗಾಗಲೇ ಈ ವರದಿಯ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು,ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಕಲಂ 69ಎ ಮತ್ತು 79(3)(ಬಿ) ಅಡಿ ಈ ಪಿಡುಗಿನ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಸಿಂಗ್ ಹೇಳಿದರು.

ಇದೊಂದು ಅತ್ಯಂತ ಗಂಭೀರ ವಿಷಯವಾಗಿದೆ ಮತ್ತು ಸಚಿವಾಲಯವು ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠವು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News