ಕರಾಚಿಯ ಕಟ್ಟಡದಲ್ಲಿ ಸ್ಫೋಟ: ಮೂರು ಮಂದಿ ಸಾವು, 16 ಜನರಿಗೆ ಗಾಯ

Update: 2020-10-21 07:30 GMT

ಕರಾಚಿ: ಪಾಕಿಸ್ತಾನದ ಕರಾಚಿ ನಗರದ ಗುಲ್ಶನ್ ಇ ಇಕ್ಬಾಲ್ ಪ್ರದೇಶದ ಮಸ್ಕನ್ ಚೌರಂಗಿ ಸಮೀಪ ಕಟ್ಟಡವೊಂದರಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. 16 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ  ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಾಳುಗಳನ್ನು ಹಾಗೂ ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ಒಯ್ಯಲಾಗಿದೆ ಎಂದು ಡಾನ್ ಮಾಧ್ಯಮ ವರದಿ ಮಾಡಿದೆ.

ಸ್ಫೋಟಕ್ಕೆ ನಿಖರ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ.ಆದಾಗ್ಯೂ ಗ್ಯಾಸ್ ಸಿಲಿಂಡರ್ ಸೋರಿಕೆ ಸ್ಫೋಟಕ್ಕೆ ಕಾರಣ ಇರಬಹುದು ಎಂದು ಮುಬಿನಾ ಟೌನ್ ಪೊಲೀಸರು ಶಂಕಿಸಿರುವುದಾಗಿ ವರದಿ ಉಲ್ಲೇಖಿಸಿದೆ. ಬಾಂಬ್ ನಿಷ್ಕ್ರೀಯ ದಳ ಸ್ಥಳಕ್ಕೆ ಬಂದು ತಪಾಸಣೆ ನಡೆಸಲಿದ್ದು, ಆ ಬಳಿಕ ಸ್ಥೋಟಕ್ಕೆ ಕಾರಣ ಏನೆಂಬುದು ಖಚಿತವಾಗಲಿದೆ.

ಕಟ್ಟಡದ 2ನೇ ಮಹಡಿಯಲ್ಲಿ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಸ್ಫೋಟದ ತೀವ್ರತೆಗೆ ಸಮೀಪದ ಕಟ್ಟಡಗಳ ಕಿಟಕಿಗಳು ಹಾಗೂ ವಾಹನಗಳಿಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News