ಏನಿದು ನಾರ್ಕೋ ಅನಾಲಿಸಿಸ್? ಇದನ್ನು ಹೇಗೆ ಮಾಡಲಾಗುತ್ತದೆ?

Update: 2020-10-21 15:42 GMT

 ಇತ್ತೀಚಿನ ವರ್ಷಗಳಲ್ಲಿ ನಾರ್ಕೋ ಅನಾಲಿಸಿಸ್ ಅಥವಾ ಮಂಪರು ಪರೀಕ್ಷೆಯು ತುಂಬ ಸುದ್ದಿ ಮಾಡುತ್ತಿದೆ. ನಾರ್ಕೋ ಅನಾಲಿಸಿಸ್ ಶಬ್ದ ದೈಹಿಕ ಅಥವಾ ಮಾನಸಿಕ ನಿಷ್ಕ್ರಿಯತೆಯನ್ನುಂಟು ಮಾಡುವ ಅರಿವಳಿಕೆ ಸ್ಥಿತಿಯನ್ನು ಸೂಚಿಸುವ ಗ್ರೀಕ್‌ನ ನಾರ್ಕ್ ಶಬ್ದದಿಂದ ಹುಟ್ಟಿಕೊಂಡಿದೆ. ಸಂಕ್ಷಿಪ್ತದಲ್ಲಿ ನಾರ್ಕೋ ಅನಾಲಿಸಿಸ್ ವ್ಯಕ್ತಿಯ ಸುಪ್ತ ಮನಸ್ಸಿನಲ್ಲಿಯ ವಿಷಯಗಳನ್ನು ಹೊರಗೆಳೆಯಲು ಸೈಕೊಟ್ರಾಪಿಕ್ ಔಷಧಿಗಳನ್ನು ಬಳಸಿ ನಡೆಸುವ ಪರೀಕ್ಷೆಯಾಗಿದೆ.

 ಇಂಗ್ಲೆಂಡ್‌ನ ಪ್ರೊ.ಜೆ.ಸ್ಟೀಫನ್ ಹಾರ್ಸ್‌ಲಿ ನಾರ್ಕೋ ಅನಾಲಿಸಿಸ್ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದು,ಅಮೆರಿಕದ ಟೆಕ್ಸಾಸ್‌ನ ಹೆರಿಗೆತಜ್ಞ ರಾಬರ್ಟ್ ಹೌಸ್ ಅವರು 1922ರಲ್ಲಿ ಮೊದಲ ಬಾರಿಗೆ ಮಂಪರು ಪರೀಕ್ಷೆಯನ್ನು ಇಬ್ಬರು ಕೈದಿಗಳ ಮೇಲೆ ನಡೆಸಿದ್ದರು. ಇತ್ತೀಚೆಗೆ ಹಥರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಂಪರು ಪರೀಕ್ಷೆ ವಿಷಯ ಮತ್ತೆ ಸದ್ದು ಮಾಡುತ್ತಿದೆ.

ನಾರ್ಕೋ ಅನಾಲಿಸಿಸ್ ಸೈಕೋಟ್ರಾಪಿಕ್ ಔಷಧಿಗಳನ್ನು ಬಳಸಿ ನಡೆಸಲಾಗುವ ಮನೋಶಾಸ್ತ್ರೀಯ ಪರೀಕ್ಷೆಯಾಗಿದೆ. ಈ ಔಷಧಿಗಳ ಮೂಲಕ ವ್ಯಕ್ತಿಯು ಮಂಪರು ಸ್ಥಿತಿಯಲ್ಲಿರುವಂತೆ ಮಾಡಲಾಗುತ್ತದೆ ಮತ್ತು ಆತನ ಕಲ್ಪನಾ ಶಕ್ತಿಯನ್ನು ತಟಸ್ಥಗೊಳಿಸಲಾಗುತ್ತದೆ. ಈ ಸ್ಥಿತಿಯಲ್ಲಿ ಅಂತಹ ವ್ಯಕ್ತಿಯು ನಿಜವನ್ನು ನುಡಿಯುತ್ತಾನೆ ಎಂದು ನಿರೀಕ್ಷಿಸಲಾಗುತ್ತದೆ ಮತ್ತು ಆತನಿಂದ ಸತ್ಯವನ್ನು ಬಯಲಿಗೆಳೆಯುವ ಪ್ರಯತ್ನಗಳನ್ನು ಮಾಡಲಾಗುತ್ತದೆ. ಯಾವುದೇ ವ್ಯಕ್ತಿ ತನ್ನ ಕಲ್ಪನಾ ಶಕ್ತಿಯನ್ನು ಬಳಸಿ ಸುಳ್ಳು ಹೇಳಬಹುದು. ಆದರೆ ನಾರ್ಕೋ ಅನಾಲಿಸಿಸ್ ಪರೀಕ್ಷೆಯಲ್ಲಿ ಅಣುಮಟ್ಟದಲ್ಲಿ ಆತನ ನರಮಂಡಲ ವ್ಯವಸ್ಥೆಯಲ್ಲಿ ಹಸ್ತಕ್ಷೇಪವನ್ನು ನಡೆಸುವ ಮೂಲಕ ಆತ ಸತ್ಯವನ್ನು ಬಚ್ಚಿಡದಂತೆ ನೋಡಿಕೊಳ್ಳಲಾಗುತ್ತದೆ ಮತ್ತು ಆತ ತನಗೆ ಗೊತ್ತಿರುವ ಮಾಹಿತಿಗಳನ್ನು ಮತ್ತು ಭಾವನೆಗಳನ್ನು ಹಂಚಿಕೊಳ್ಳುವಂತೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಬಳಸಲಾಗುವ ಔಷಧಿಗಳು ವ್ಯಕ್ತಿಯ ಕಲ್ಪನಾ ಶಕ್ತಿಯನ್ನು ಸ್ಥಗಿತಗೊಳಿಸುವುದರಿಂದ ಸುಳ್ಳು ಹೇಳುವುದು ಅಂತಹ ವ್ಯಕ್ತಿಗೆ ಕಷ್ಟವಾಗುತ್ತದೆ. ಹಾಗೆಂದು ಸುಳ್ಳು ಹೇಳಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಲಾಗದು.

ಈ ಪರೀಕ್ಷೆ ಹೇಗೆ ನಡೆಯುತ್ತದೆ ?

 ವ್ಯಕ್ತಿಯ ಶರೀರದಲ್ಲಿ ಸೋಡಿಯಂ ಪೆಂಟಾಥಾಲ್ ಅಥವಾ ಸೋಡಿಯಂ ಅಮೈಟಾಲ್‌ನಂತಹ ಸಮ್ಮೋಹಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ ಮತ್ತು ಇದರ ಡೋಸ್ ಅಥವಾ ಪ್ರಮಾಣ ವ್ಯಕ್ತಿಯ ಲಿಂಗ,ವಯಸ್ಸು,ಆರೋಗ್ಯ ಮತ್ತು ದೈಹಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ನಿಧಾನ ಐವಿಯ ಮೂಲಕ ಔಷಧಿಯನ್ನು ನೀಡಲಾಗುತ್ತದೆ ಮತ್ತು ವ್ಯಕ್ತಿಯ ರಕ್ತಪ್ರವಾಹದಲ್ಲಿ ಐವಿ ಇನ್‌ಪ್ಯೂಸನ್ ಅನ್ನು ವ್ಯವಸ್ಥಿತವಾಗಿ ನಿಯಂತ್ರಿಸಲಾಗುತ್ತದೆ. ಪರೀಕ್ಷೆಯುದ್ದಕ್ಕೂ ಆತನ ರಕ್ತದೊತ್ತಡ,ನಾಡಿಮಿಡಿತ ಮತ್ತು ಇಸಿಜಿ ಇತ್ಯಾದಿಗಳ ಮೇಲೆ ನಿರಂತರ ನಿಗಾ ಇರಿಸಲಾಗುತ್ತದೆ.

ಪರೀಕ್ಷೆಗೊಳಗಾದ ವ್ಯಕ್ತಿಗೆ ಏನಾಗುತ್ತದೆ?

 ಸೈಕೊಟ್ರಾಪಿಕ್ ಔಷಧಿಗಳ ಬಳಕೆಯು ವ್ಯಕ್ತಿಯನ್ನು ಮಂಪರು ಸ್ಥಿತಿಗೆ ತಳ್ಳುತ್ತದೆ ಮತ್ತು ಆತ ನಿದ್ರಿಸುವಂತೆ ಮಾಡುತ್ತದೆ. ವ್ಯಕ್ತಿಯನ್ನು ಅರೆ ನಿದ್ರಾವಸ್ಥೆಯಲ್ಲಿ ಇರಿಸಲಾಗುತ್ತದೆ ಮತ್ತು ಇಂತಹ ಸ್ಥಿತಿಯಲ್ಲಿ ಆತ ಕೆಲವು ಸಲಹೆಗಳ ಬಳಿಕ ನಿರ್ದಿಷ್ಟ,ಆದರೆ ಸರಳವಾದ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಪರೀಕ್ಷೆಯ ಸಂದರ್ಭ ವ್ಯಕ್ತಿಯ ಪ್ರಜ್ಞೆಯ ಮಟ್ಟವನ್ನು ಕಾಯ್ದುಕೊಳ್ಳುವುದು ಮತ್ತು ಆತನನ್ನು ಮಂಪರು ಸ್ಥಿತಿಯಲ್ಲಿ ಇರಿಸುವುದು ಅತ್ಯಂತ ಮುಖ್ಯವಾಗಿದೆ. ರಾಸಾಯನಿಕವು ಶರೀರವನ್ನು ಪ್ರವೇಶಿಸಿದ ಬಳಿಕ ಕೇಂದ್ರ ನರಮಂಡಲ ವ್ಯವಸ್ಥೆಯನ್ನು ಮಂಕಾಗಿಸುತ್ತದೆ,ರಕ್ತದೊತ್ತಡವನ್ನು ತಗ್ಗಿಸುತ್ತದೆ ಮತ್ತು ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ವ್ಯಕ್ತಿಯಿಂದ ಹೆಚ್ಚಿನ ಪ್ರತಿರೋಧಗಳಿರುವುದಿಲ್ಲ ಮತ್ತು ಇಚ್ಛಿತ ಪ್ರಶ್ನೆಗಳಿಗೆ ಆತನಿಂದ ಉತ್ತರಗಳನ್ನು ಪಡೆಯಬಹುದು.

ಈ ಪರೀಕ್ಷೆಯಿಂದ ಸತ್ಯವನ್ನು ಗ್ಯಾರಂಟಿಯಾಗಿ ಬಯಲಿಗೆಳೆಯಬಹುದೇ?

ಮಂಪರು ಪರೀಕ್ಷೆಯು ಸತ್ಯವನ್ನು ಬಯಲಿಗೆಳೆಯಲು ಶೇ.100ರಷ್ಟು ಗ್ಯಾರಂಟಿ ಪರೀಕ್ಷೆ ಎಂದು ಪರಿಗಣಿಸುವುದು ಕಠಿಣವಾಗುತ್ತದೆ ಎನ್ನುತ್ತಾರೆ ತಜ್ಞರು. ಆದರೂ ಈ ಪರೀಕ್ಷೆಯು ವ್ಯಕ್ತಿಯು ಮಂಪರು ಸ್ಥಿತಿಯಲ್ಲಿದ್ದಾಗ ಆತನಿಂದ ಮಾಹಿತಿಗಳನ್ನು ಹೊರಗೆಳೆಯಲು ವ್ಯಾಪಕ ಬಳಕೆಯಾಗುತ್ತಿದೆ. ನಾರ್ಕೋ ಅನಾಲಿಸಿಸ್ ಅಲ್ಲದೆ ಹೆಚ್ಚಾಗಿ ಬಳಕೆಯಾಗುತ್ತಿರುವ ಇತರ ಎರಡು ಪರೀಕ್ಷೆಗಳೆಂದರೆ ಪಾಲಿಗ್ರಾಫ್ ಅಥವಾ ಸುಳ್ಳು ಪತ್ತೆ ಪರೀಕ್ಷೆ ಹಾಗೂ ಪಿ3000 ಅಥವಾ ಬ್ರೇನ್ ಮ್ಯಾಪಿಂಗ್ ಪರೀಕ್ಷೆ.

ನಾರ್ಕೋ ಟೆಸ್ಟ್‌ನಲ್ಲಿಯ ಅಪಾಯಗಳೇನು?

 ನಾರ್ಕೋ ಅನಾಲಿಸಿಸ್ ಪರೀಕ್ಷೆಗಳು ವ್ಯಕ್ತಿಗೆ ಉಂಟು ಮಾಡುವ ಅಪಾಯಗಳು ಮತ್ತು ಈ ಪರೀಕ್ಷೆಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತದೆ ಎಂಬ ಪರಿಗಣನೆಯಿಂದಾಗಿ ಹಲವಾರು ದೇಶಗಳು ಈ ಪರೀಕ್ಷೆ ನಡೆಸುವುದನ್ನು ನಿಲ್ಲಿಸಿವೆ. ತಪ್ಪು ಪ್ರಮಾಣದಲ್ಲಿ ಸೈಕೊಟ್ರಾಪಿಕ್ ಔಷಧಿಗಳನ್ನು ಬಳಸಿದರೆ ವ್ಯಕ್ತಿಯು ಕೋಮಾಕ್ಕೆ ಜಾರಬಹುದು ಅಥವಾ ಆತನ ಸಾವೂ ಸಂಭವಿಸಬಹುದು ಎಂದು ಅಧ್ಯಯನಗಳು ಮತ್ತು ತಜ್ಞರು ಬೆಟ್ಟುಮಾಡಿದ್ದಾರೆ.

ಭಾರತದಲ್ಲಿ ನಾರ್ಕೋ ಅನಾಲಿಸಿಸ್

ಭಾರತದಲ್ಲಿ ಮೊದಲ ಬಾರಿಗೆ ನಾರ್ಕೋ ಅನಾಲಿಸಿಸ್ ಪರೀಕ್ಷೆಯನ್ನು 2002ರಲ್ಲಿ ಗೋಧ್ರಾ ಪ್ರಕರಣದಲ್ಲಿ ನಡೆಸಲಾಗಿತ್ತು. ಹೆಚ್ಚಿನ ಅಭಿವೃದ್ಧಿ ಅಥವಾ ಅಭಿವೃದ್ಧಿಶೀಲ ದೇಶಗಳಲ್ಲಿ ತನಿಖಾ ಉದ್ದೇಶಗಳಿಗಾಗಿ ಈ ಪರೀಕ್ಷೆಯನ್ನು ನಡೆಸಲು ಬಹಿರಂಗವಾಗಿ ಅನುಮತಿಯನ್ನು ನೀಡಲಾಗುವುದಿಲ್ಲ ಮತ್ತು ಈ ಪರೀಕ್ಷೆಗಳಿಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳಿಂದ ಟೀಕೆಗಳೂ ಹೆಚ್ಚುತ್ತಿವೆ. ಭಾರತದಲ್ಲಿ ಅರಿವಳಿಕೆ ತಜ್ಞ,ಮನಶಾಸ್ತ್ರಜ್ಞ,ಫಾರೆನ್ಸಿಕ್ ಸೈಕಾಲಜಿಸ್ಟ್,ಆಡಿಯೋ-ವೀಡಿಯೊಗ್ರಾಫರ್ ಮತ್ತು ಸಹಾಯಕ ಸಿಬ್ಬಂದಿಗಳನ್ನೊಳಗೊಂಡ ತಂಡವು ಮಂಪರು ಪರೀಕ್ಷೆಯನ್ನು ನಡೆಸುತ್ತದೆ. ಕೆಲವು ಪ್ರಕರಣಗಳಲ್ಲಿ ಮಂಪರು ಪರೀಕ್ಷೆಯಲ್ಲಿ ವ್ಯಕ್ತಿಯು ಬಾಯ್ಬಿಟ್ಟ ಮಾಹಿತಿಗಳನ್ನು ಆತನನ್ನು ಪಾಲಿಗ್ರಾಫ್ ಮತ್ತು ಬ್ರೇನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಒಳಪಡಿಸುವ ಮೂಲಕ ದೃಢಪಡಿಸಿಕೊಳ್ಳಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News