ಜಾರಿ ನಿರ್ದೇಶನಾಲಯದ ಮುಂದೆ ಮತ್ತೆ ಹಾಜರಾದ ಫಾರೂಕ್ ಅಬ್ದುಲ್ಲಾ

Update: 2020-10-21 14:19 GMT

ಹೊಸದಿಲ್ಲಿ,ಅ.21: ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ (ಜೆಕೆಸಿಎ)ನ ಬಹುಕೋಟಿ ರೂ.ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ಬುಧವಾರ ಜಾರಿ ನಿರ್ದೇಶನಾಲಯ (ಈ.ಡಿ)ದ ಮುಂದೆ ಹಾಜರಾದರು. ಈ ವಾರದಲ್ಲಿ ಎರಡನೇ ಬಾರಿ ಈ.ಡಿ.ಎದುರು ಅವರ ಹಾಜರಾಗಿದ್ದಾರೆ.

 ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಅಬ್ದುಲ್ಲಾ (83)ರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅ.19ರಂದು ಆರು ಗಂಟೆಗೂ ಅಧಿಕ ಸಮಯ ವಿಚಾರಣೆಗೊಳಪಡಿಸಲಾಗಿತ್ತು.

ವಿಚಾರಣೆಯ ಬಗ್ಗೆ ತನಗೆ ಚಿಂತೆಯಿಲ್ಲ ಮತ್ತು ತನಿಖೆಗೆ ಸಹಕರಿಸುವುದಾಗಿ ಅಬ್ದುಲ್ಲಾ ಸೋಮವಾರ ಈ.ಡಿ.ಕಚೇರಿಯಿಂದ ಹೊರಬಂದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದರು.

ವಿಚಾರಣೆಗೆ ನಾಲ್ಕು ದಿನಗಳ ಮೊದಲು ಶ್ರೀನಗರದಲ್ಲಿ ಅಬ್ದುಲ್ಲಾರ ನಿವಾಸದಲ್ಲಿ ಸಭೆ ಸೇರಿದ್ದ ಜಮ್ಮು-ಕಾಶ್ಮೀರದ ಮುಖ್ಯವಾಹಿನಿ ರಾಜಕೀಯ ಪಕ್ಷಗಳು ಗುಪ್ಕರ್ ಘೋಷಣೆಗಾಗಿ ಜನತಾ ಮೈತ್ರಿಕೂಟವನ್ನು ರಚಿಸಿದ್ದವು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ಮರುಸ್ಥಾಪನೆಗಾಗಿ ಹೋರಾಡುವುದು ಮೈತ್ರಿಕೂಟದ ಉದ್ದೇಶವಾಗಿದೆ.

ಅಬ್ದುಲ್ಲಾ ಜೆಕೆಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಗರಣ ನಡೆದಾಗ ಅವರ ಪಾತ್ರ ಮತ್ತು ಕೈಗೊಂಡಿದ್ದ ನಿರ್ಧಾರಗಳ ಬಗ್ಗೆ ಈ.ಡಿ.ಅಬ್ದುಲ್ಲಾರನ್ನು ವಿಚಾರಣೆಗೊಳಪಡಿಸಿದೆ ಎನ್ನಲಾಗಿದೆ. ಅವರನ್ನು ಮೊದಲ ಬಾರಿ ಕಳೆದ ವರ್ಷದ ಜುಲೈನಲ್ಲಿ ಚಂಡಿಗಡದಲ್ಲಿ ವಿಚಾರಣೆಗೊಳಪಡಿಸಲಾಗಿತ್ತು.

ಜೆಕೆಸಿಎ ಪದಾಧಿಕಾರಿಗಳ ವಿರುದ್ಧ ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನ ಆಧಾರದಲ್ಲಿ ಈ.ಡಿ.ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆಯನ್ನು ನಡೆಸುತ್ತಿದೆ.

ಜೆಕೆಸಿಎಗೆ ಬಿಸಿಸಿಐ ನೀಡಿದ್ದ ಅನುದಾನದಲ್ಲಿ 43.69 ಕೋ.ರೂ.ಗಳ ದುರ್ಬಳಕೆಗಾಗಿ ಸಿಬಿಐ 2018ರಲ್ಲಿ ಅಬ್ದುಲ್ಲಾ ಮತ್ತು ಇತರ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News