ತಬ್ಲೀಘಿ ಜಮಾಅತ್ ಸಭೆ: ವಿದೇಶಿಗರ ಆರೋಪ ಸಾಬೀತುಪಡಿಸುವ ಯಾವ ಪುರಾವೆಯೂ ಇಲ್ಲ; ನ್ಯಾಯಾಲಯ

Update: 2020-10-21 15:39 GMT

ಮುಂಬೈ, ಅ. 21: ಕೊರೋನ ಸಾಂಕ್ರಾಮಿಕ ರೋಗ ನಿಯಂತ್ರಣದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್ ಉಲ್ಲಂಘಿಸಿದ ಆರೋಪ ಎದುರಿಸುತ್ತಿದ್ದ ತಬ್ಲೀಘಿ ಜಮಾಅತ್‌ನ ಸದಸ್ಯರಾಗಿರುವ 20 ವಿದೇಶಿ ಪ್ರಜೆಗಳನ್ನು ಮುಂಬೈ ಮೆಟ್ರೋಪಾಲಿಟಿನ್ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ. ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು  ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ (ಅಂಧೇರಿ) ಆರ್.ಆರ್.ಖಾನ್ ಪ್ರತಿಪಾದಿಸಿದರು. ಅನುಮಾನಗಳನ್ನು ಹೊರತುಪಡಿಸಿದರೆ, ಆರೋಪಿಗಳು ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ತೋರಿಸುವ ಲವಲೇಷ ಪುರಾವೆ ಕೂಡ ಪ್ರಾಸಿಕ್ಯೂಷನ್‌ನಲ್ಲಿ ಇಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

ಲಾಕ್‌ಡೌನ್ ನಿಯಮ ಹಾಗೂ ಪೊಲೀಸ್ ಆಯುಕ್ತರ ಆದೇಶವನ್ನು ಆರೋಪಿಗಳು ಉಲ್ಲಂಘಿಸಿಲ್ಲ ಎಂದು ಪ್ರಾಸಿಕ್ಯೂಷನ್ ಸಾಕ್ಷಿಗಳು ಸ್ಪಷ್ಟಪಡಿಸಿವೆ. ದಾಖಲೆಯಲ್ಲಿರುವ ಪುರಾವೆ ಹಾಗೂ ಸಾಕ್ಷಿಗಳ ಹೇಳಿಕೆ ವಿರೋಧಾಭಾಸದಿಂದ ಕೂಡಿದೆ ಎಂದು ನ್ಯಾಯಾಲಯ ತಿಳಿಸಿದೆ. ಪಂಚನಾಮೆಗೆ ಸಿದ್ಧತೆಯನ್ನು ಕೂಡ ಪ್ರಾಸಿಕ್ಯೂಷನ್ ಮಾಡಿಲ್ಲ. ಅಲ್ಲದೆ, ಯಾರೊಬ್ಬ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ. ಆರೋಪವನ್ನು ಬೆಂಬಲಿಸುವ ಕಾನೂನು ಪುರಾವೆಯನ್ನು ಪ್ರಾಸಿಕ್ಯೂಷನ್ ಸಲ್ಲಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹತ್ಯೆ ಯತ್ನ, ಕೊಲೆ ಸಮಾನವಲ್ಲದ ದಂಡನೀಯ ನರಹತ್ಯೆ, ವೀಸಾ ನಿಯಮಗಳ ಹಾಗೂ ಲಾಕ್‌ಡೌನ್‌ನಲ್ಲಿ ಜಾರಿಗೊಳಿಸಲಾದ ನಿಯಮಗಳ ಉಲ್ಲಂಘನೆ ಮೊದಲಾದ ಆರೋಪಗಳ ಅಡಿಯಲ್ಲಿ ಅಂಧೇರಿಯ ಡಿಎಎನ್ ನಗರ್ ಪೊಲೀಸ್ ಠಾಣೆಯಲ್ಲಿ 20 ವಿದೇಶಿಗರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಅನಂತರ ಆಗಸ್ಟ್‌ನಲ್ಲಿ ಗಂಭೀರ ಆರೋಪಗಳಾದ ಹತ್ಯೆ ಯತ್ನ ಹಾಗೂ ಕೊಲೆ ಸಮಾನವಲ್ಲದ ದಂಡನೀಯ ನರಹತ್ಯೆ ಆರೋಪವನ್ನು ಕೈಬಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News