ಪತ್ರಕರ್ತರಿಗೆ 'ಕಿರುಕುಳ': ಜಾಗತಿಕ ಪತ್ರಿಕಾ ಮಂಡಳಿಯಿಂದ ಪ್ರಧಾನಿ ಮೋದಿಗೆ ಪತ್ರ

Update: 2020-10-22 11:56 GMT

 ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರ ಬರೆದಿರುವ ಎರಡು ಅಂತರ್‌ರಾಷ್ಟ್ರೀಯ ಪತ್ರಿಕಾ ಮಂಡಳಿಗಳು, ಪತ್ರಕರ್ತರು ಕಿರುಕುಳ ಹಾಗೂ ಪ್ರತೀಕಾರದ ಭಯವಿಲ್ಲದೆ ಕೆಲಸ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿವೆ.

ಮಂಗಳವಾರ ಬರೆದ ಪತ್ರದಲ್ಲಿ ಆಸ್ಟ್ರೀಯದಲ್ಲಿ ಮುಖ್ಯ ಕಚೇರಿ ಇರುವ ಇಂಟರ್‌ನ್ಯಾಶನಲ್ ಪ್ರೆಸ್ ಇನ್‌ಸ್ಟಿಟ್ಯೂಟ್(ಐಪಿಐ) ಹಾಗೂ ಬೆಲ್ಜಿಯಂ ಮೂಲದ ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ಜರ್ನಲಿಸ್ಟ್(ಐಎಫ್ ಜೆ)ಪತ್ರಕರ್ತರ ವಿರುದ್ಧ ರಾಜ್ಯ ಸರಕಾರಗಳು ದಾಖಲಿಸಿರುವ ದೇಶದ್ರೋಹ ಸಹಿತ ಎಲ್ಲ ಪ್ರಕರಣಗಳನ್ನು ಕೈಬಿಡುವಂತೆ ನಿರ್ದೇಶಿಸಬೇಕೆಂದು ಪ್ರಧಾನಿಯವರನ್ನು ಕೇಳಿಕೊಂಡಿವೆ.

ಕೊರೋನ ಸಾಂಕ್ರಾಮಿಕ ರೋಗ ಹರಡಲು ಆರಂಭವಾದ ಬಳಿಕ ಪತ್ರಕರ್ತರ ಮೇಲಿನ ಪ್ರಕರಣಗಳ ಸಂಖ್ಯೆಯಲ್ಲೂ ಅಗಾಧ ಹೆಚ್ಚಳವಾಗಿದೆ. ಸರಕಾರದ ನ್ಯೂನತೆಯನ್ನು ಬಹಿರಂಗಪಡಿಸಿದವರನ್ನು ಮೌನವಾಗಿಸಲು ಆರೋಗ್ಯ ಬಿಕ್ಕಟ್ಟನ್ನು ಬಳಸಲಾಗುತ್ತಿದೆ. ಯಶಸ್ವಿ ಆರೋಗ್ಯ ಪ್ರತಿಕ್ರಿಯೆಗೆ ಮುಕ್ತ ಮಾಧ್ಯಮ ಅತ್ಯಗತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ.

ಸ್ವತಂತ್ರ ಹಾಗೂ ವಿಮರ್ಶಾತ್ಮಕ ಪತ್ರಕರ್ತರಿಗೆ ಕಿರುಕುಳ ನೀಡಲು ದೇಶದ್ರೋಹ ಕಾನೂನುಗಳನ್ನು ಬಳಸುವುದು ದೇಶದ ಅಂತರ್‌ರಾಷ್ಟ್ರೀಯ ಬದ್ಧತೆಗಳ ಉಲ್ಲಂಘನೆ ಮಾತ್ರವಲ್ಲ, ಯಾವುದೇ ಟೀಕೆಗಳನ್ನು ವೌನಗೊಳಿಸುವ ಸರಕಾರದ ಪ್ರಯತ್ನವೂ ಆಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಮಾರ್ಚ್ 25ರಂದು ಮೊದಲ ಲಾಕ್‌ಡೌನ್ ವಿಧಿಸಿದ ಬಳಿಕ ಭಾರತದಲ್ಲಿ ಸಾಂಕ್ರಾಮಿಕ ರೋಗದ ಕುರಿತು ವರದಿ ಮಾಡಿರುವ ಸುಮಾರು 55 ಪತ್ರಕರ್ತರನ್ನು ಗುರಿ ಮಾಡಲಾಗಿದೆ. ಮೇ 31ರಂದು ಹಕ್ಕುಗಳು ಹಾಗೂ ಅಪಾಯಗಳ ವಿಶ್ಲೇಷಣೆ ಗುಂಪಿನ ವರದಿಯು ಇದನ್ನು ಬೆಟ್ಟು ಮಾಡಿದೆ ಎಂದು ಎರಡು ಪತ್ರಿಕಾ ಮಂಡಳಿಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News