ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ವಂಚನೆ ಆರೋಪ: ನಾಲ್ವರ ಬಂಧನ

Update: 2020-10-22 16:41 GMT

ಬೆಂಗಳೂರು, ಅ.22: ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಂಡು ಸಾರ್ವಜನಿಕರನ್ನು ವಂಚನೆ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಸಿಐಡಿ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ರಾಜಸ್ಥಾನದ ಭರತ್‍ಪುರ ನಿವಾಸಿಗಳಾದ ಅನ್ಸರ್, ಬಲ್ವಿಂದರ್ ಸಿಂಗ್, ಸೈನಿ ಮತ್ತು ಸದ್ದಾಂ ಎಂದು ಪೊಲೀಸರು ಗುರುತಿಸಿದ್ದು, ಮತ್ತೊಬ್ಬ ಆರೋಪಿ ಶಕೀಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ.

ರಾಜಸ್ಥಾನದಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಸಾರ್ವಜನಿಕರ ಹೆಸರಿನಲ್ಲಿ ಸಿಮ್ ಕಾರ್ಡ್‍ಗಳನ್ನು ಉಪಯೋಗಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಸೃಷ್ಟಿಸಿ, ಆನ್‍ಲೈನ್ ಮರು ಮಾರಾಟ ಜಾಲತಾಣಗಳಲ್ಲಿ ನಕಲಿ ಜಾಹೀರಾತು ನೀಡಿ, ತದನಂತರ ಹಣ ವಸೂಲಿ ಮಾಡಿ ವಂಚನೆ ಮಾಡುತ್ತಿದ್ದ ಮಾಹಿತಿ ಬೆಳಕಿಗೆ ಬಂದಿದೆ.

ಅಷ್ಟೇ ಅಲ್ಲದೆ, ಆರೋಪಿಗಳು ನಕಲಿ ಖಾತೆ ತೆರೆದು ಬಳಿಕ ಆರ್ಥಿಕ ಸಂಕಷ್ಟದಲ್ಲಿದ್ದೇನೆ. ನಿಮ್ಮಿಂದ ಹಣದ ಸಹಾಯ ಬೇಕು ಎಂದು ಸಂದೇಶ ಕಳುಹಿಸುತ್ತಿದ್ದರು. ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿ.ಹರಿಶೇಖರನ್, ಚಂದ್ರಗುಪ್ತ ಸೇರಿದಂತೆ ಇನ್ನಿತರೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿತ್ತು ಎಂದು ತಿಳಿದು ಬಂದಿದೆ.

ಸಾರ್ವಜನಿಕರಲ್ಲಿ ಮನವಿ

ಸಾರ್ವಜನಿಕರು ಈಗಾಗಲೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿರುವ ಗಣ್ಯರು ಮತ್ತು ಸರಕಾರಿ ಅಧಿಕಾರಿಗಳ ಮತ್ತೊಂದು ಸಾಮಾಜಿಕ ಜಾಲತಾಣ ಖಾತೆಯಿಂದ ಮಿತ್ರತ್ವ ಮನವಿ ಬಂದಲ್ಲಿ ಅವುಗಳನ್ನು ಸ್ವೀಕರಿಸುವ ಮುಂಚೆ ಎಚ್ಚರಿಕೆ ವಹಿಸಿ ಇಂತಹ ವಂಚನೆಗಳಿಗೆ ಬಲಿಯಾಗಬೇಡಿ. ಇಂತಹ ಕೋರಿಕೆ ಬಂದಲ್ಲಿ ಮಾಹಿತಿಯನ್ನು ಸೈಬರ್ ಅಪರಾಧ ವಿಭಾಗ, ಸಿಐಡಿ ದೂರವಾಣಿ ಸಂಖ್ಯೆ 080 22094601 ಗೆ ತಿಳಿಸಲು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News