ಸಾರಿಗೆ ಇಲಾಖೆ, ಓಲಾ, ಉಬರ್ ಸಂಸ್ಥೆಗಳ ವಿರುದ್ಧ ಚಾಲಕರ ಪ್ರತಿಭಟನೆ

Update: 2020-10-22 16:42 GMT

ಬೆಂಗಳೂರು, ಅ.22: ಸಾರಿಗೆ ಇಲಾಖೆ, ಓಲಾ ಹಾಗೂ ಉಬರ್ ಸಂಸ್ಥೆಗಳ ಇಬ್ಬಗೆ ನೀತಿಯಿಂದಾಗಿ ವಾಹನ ಚಾಲಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ಚಾಲಕರ ಒಕ್ಕೂಟ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಓಲಾ, ಉಬರ್ ಸಂಸ್ಥೆಗಳು ಚಾಲಕರನ್ನು ಶೋಷಣೆ ಮಾಡುತ್ತಿವೆ. ಸರಿಯಾದ ರೀತಿಯಲ್ಲಿ ಕೆಲಸ ನೀಡುವುದಿಲ್ಲ. ಅನಗತ್ಯ ವಿಷಯಗಳನ್ನು ಮುಂದಿಟ್ಟುಕೊಂಡು ಚಾಲಕರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಹಾಗೂ ಕಿಮೀ ಕಮಿಷನ್ ಹೆಚ್ಚಳ ಮಾಡುವಂತೆ ಒತ್ತಾಯಿಸಿದರೂ ನಿರ್ಲಕ್ಷ್ಯ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರು ಚಾಲಕರ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಆದ್ಯತೆ ಕೊಡದೆ, ಓಲಾ, ಉಬರ್ ಸಂಸ್ಥೆಗಳ ಪರವಾದ ನೀತಿಯನ್ನೇ ಅನುಸರಿಸುತ್ತಿದ್ದಾರೆ. ಇದರಿಂದ ಲಕ್ಷಾಂತರ ರೂ.ಸಾಲ ಮಾಡಿ ವಾಹನ ಕೊಂಡ ಚಾಲಕರು, ಇಂದು ಕೆಲಸವಿಲ್ಲದೆ ನಿರುದ್ಯೋಗಿಗಳಾಗುತ್ತಿದ್ದಾರೆಂದು ಒಕ್ಕೂಟದ ಗಂಡಸಿ ಸದಾನಂದ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಲಕರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಕಂಟಕಪ್ರಾಯವಾಗಿರುವ ಅನಧಿಕೃತ ಆನ್‍ಲೈನ್ ಆ್ಯಪ್‍ಗಳನ್ನು ರದ್ದು ಮಾಡಬೇಕು. ಕೇಂದ್ರ ಸರಕಾರದ ಆದೇಶದಂತೆ ಸಾಲ ಮರುಪಾವತಿಯನ್ನು ಮುಂದೂಡುವುದು ಹಾಗೂ ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಹಲವು ದಿನಗಳಿಂದ ಸರಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಸರಕಾರ ಇತ್ತ ಗಮನ ಕೊಡುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ.

ರಾಜ್ಯ ಸರಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ವಾಹನ ಚಾಲಕರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಗಮನ ಕೊಡದಿದ್ದರೆ ವಿಧಾನಸೌಧದ ಮುಂಭಾಗ ಎಲ್ಲ ವಾಹನಗಳನ್ನು ನಿಲ್ಲಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News